ನವದೆಹಲಿ:ಶನಿವಾರ ತೀಸ್ ಹಜಾರಿ ನ್ಯಾಯಾಲಯದ ಬಳಿ ನಡೆದ ಪೊಲೀಸರು ಮತ್ತು ವಕೀಲರ ನಡುವಿನ ಘರ್ಷಣೆ ಪ್ರಕರಣವನ್ನ ನ್ಯಾಯಾಂಗ ತನಿಖೆಗೆ ಒಪ್ಪಿಸಿ ದೆಹಲಿ ಹೈಕೋರ್ಟ್ ಆದೇಶಿಸಿದೆ.
ದೆಹಲಿ ಹೈಕೋರ್ಟ್ ನಿವೃತ್ತ ನ್ಯಾಯಾಧೀಶ ಎಸ್.ಪಿ.ಗರ್ಗ್ ನ್ಯಾಯಾಂಗ ತನಿಖೆ ನಡೆಸಲಿದ್ದಾರೆ. ಅವರಿಗೆ ಸಿಬಿಐ ನಿರ್ದೇಶಕರು, ಗುಪ್ತಚರ ಬ್ಯೂರೋ ನಿರ್ದೇಶಕರು ಮತ್ತು ವಿಜಿಲೆನ್ಸ್ ನಿರ್ದೇಶಕರು ಅಥವಾ ಅವರು ನೇಮಕ ಮಾಡಿದ ಯಾವುದೇ ಉನ್ನತ ಶ್ರೇಣಿಯ ಅಧಿಕಾರಿ ಸಹಾಯ ಮಾಡುತ್ತಾರೆ ಎಂದು ಹೈಕೋರ್ಟ್ ಹೇಳಿದೆ.
ತನಿಖೆಗೆ 6 ವಾರಗಳ ಕಾಲಾವಕಾಶ ನೀಡಲಾಗಿದೆ. ಅಲ್ಲದೆ ಘರ್ಷಣೆಯಲ್ಲಿ ಭಾಗಿಯಾದ ಪೊಲೀಸರನ್ನ ಅಮಾನತು ಮಾಡುವಂತೆ ದೆಹಲಿ ಪೊಲೀಸ್ ಆಯುಕ್ತರಿ ನಿರ್ದೇಶಿಸಿದ್ದು, ಘಟನೆಯಲ್ಲಿ ಗಾಯಗೊಂಡಿರುವ ವಕೀಲ ವಿಜಯ್ ವರ್ಮಾ ಅವರಿಗೆ 50 ಸಾವಿರ ಮತ್ತು ಇನ್ನುಳಿದ ಇಬ್ಬರಿಗೆ 15 ಮತ್ತು 10 ಸಾವಿರ ರೂ. ಪರಿಹಾರ ನೀಡುವಂತೆ ಸೂಚಿಸಿದೆ.
ಅಲ್ಲದೆ ಪೊಲೀಸರು ಮತ್ತು ವಕೀಲರ ನಡುವಿನ ಘರ್ಷಣೆ ಪ್ರಕರಣದಲ್ಲಿ ಸಂಪರ್ಕವಿರುವ ಕಾರಣ ವಿಶೇಷ ಆಯುಕ್ತ ಸಂಜಯ್ ಸಿಂಗ್ ಮತ್ತು ಹೆಚ್ಚುವರಿ ಡಿಸಿಪಿ ಹರೀಂದರ್ ಸಿಂಗ್ ಅವರನ್ನ ವರ್ಗಾವಣೆ ಮಾಡುವಂತೆ ಪೊಲೀಸ್ ಆಯುಕ್ತರಿಗೆ ದೆಹಲಿ ಹೈಕೋರ್ಟ್ ಸೂಚನೆ ನೀಡಿದೆ.