ನವದೆಹಲಿ:ರಾಷ್ಟ್ರದ ರಾಜಧಾನಿಯಾದ ನವದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ ಆವರಣದಲ್ಲಿ, ಕೇಂದ್ರ ಸರ್ಕಾರದ ಪ್ರಜಾಪ್ರಭುತ್ವ ವಿರೋಧಿ ನೀತಿಗಳ ವಿರುದ್ಧ ನಡೆಯುತ್ತಿರುವ ಹೋರಾಟ ಮತ್ತು ಪ್ರತಿಭಟನೆಗಳು ದೇಶದ ವಿದ್ಯಾವಂತ ಮತ್ತು ರಾಜಕೀಯವಾಗಿ ಪ್ರಜ್ಞಾವಂತವಾಗಿರುವ ಯುವಕರನ್ನು ಕಾಡುತ್ತಿರುವ ಅಭದ್ರತೆಯ ಲಕ್ಷಣವಾಗಿದೆ.
ಅದಕ್ಕಿಂತ ಹೆಚ್ಚಾಗಿ, ಈ ಪ್ರತಿಭಟನೆಗಳನ್ನು ನವದೆಹಲಿ ಮೂಲದ ಒಂದು ಗಣ್ಯ ವಿಶ್ವವಿದ್ಯಾಲಯಕ್ಕೆ ಮತ್ತು ಅದರ ಸವಲತ್ತಿಗೆ ಸಂಬಂಧಿಸಿದ್ದು ಎಂದು ಸೀಮಿತಗೊಳಿಸುವುದು ತಪ್ಪಾಗುತ್ತದೆ. ಇದನ್ನು ಕೇವಲ ಜೆಎನ್‌ಯು ಆವರಣದ ಹೋರಾಟ ಎಂದು ಪರಿಗಣಿಸದೆ, ಇತ್ತೀಚೆಗೆ ಕೇಂದ್ರ ಸರ್ಕಾರ ಅಂಗೀಕರಿಸಿದ ಶಾಸನಬದ್ಧ ಪೌರತ್ವ (ತಿದ್ದುಪಡಿ) ಕಾಯ್ದೆ 2019 ಮತ್ತು ಉದ್ದೇಶಿತ ರಾಷ್ಟ್ರೀಯ ನಾಗರಿಕ ನೋಂದಣಿ ಕಾಯ್ದೆ ವಿರುದ್ಧ ದೇಶದ ಉಳಿದ ಭಾಗಗಳಲ್ಲಿನ ಯುವಕರ ಕಿಚ್ಚು ಎಂದು ಪರಿಗಣಿಸುವುದು ಸೂಕ್ತ.
ಅಸ್ಸಾಂ ಮತ್ತು ಈಶಾನ್ಯ ಭಾರತ ಸೇರಿದಂತೆ ದೇಶದ ಉಳಿದ ಭಾಗಗಳಲ್ಲಿ ಸುಮಾರು ಒಂದು ತಿಂಗಳಿಗಿಂತ ಹೆಚ್ಚು ಸಮಯದಿಂದ ಸಿಎಎ / ಎನ್‌ಆರ್‌ಸಿ ವಿರೋಧಿ ಪ್ರತಿಭಟನೆಗಳು ನಡೆಯುತ್ತಿದೆ. ದೇಶದಲ್ಲಿ ಒಂದು ಬಗೆಯ ಹೊಸ ರಾಜಕಾರಣ ಮುಂಚೂಣಿಯಲ್ಲಿದ್ದರೂ, ದೇಶವ್ಯಾಪಿ ಈ ವಿರೋಧಗಳು ಅದರ ರಾಜಕೀಯ ಪರಿಣಾಮಗಳಿಲ್ಲದೆ ಬೇರೇನೂ ಅಲ್ಲ.
ಜೆಎನ್‌ಯು ಬಿಕ್ಕಟ್ಟು
ಹಾಸ್ಟೆಲ್ ಶುಲ್ಕ ಹೆಚ್ಚಳವನ್ನು ವಿರೋಧಿಸಿ ಕಳೆದ ವರ್ಷ ಅಕ್ಟೋಬರ್ ಅಂತ್ಯದಿಂದ ಜೆಎನ್‌ಯು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಅದರಲ್ಲೂ ವಿಶೇಷವಾಗಿ ವಿಶ್ವವಿದ್ಯಾಲಯದ ಅಧಿಕಾರಿಗಳ ನಿರ್ವಹಣೆ, ಮೆಸ್ ಕೆಲಸಗಾರರು, ಅಡುಗೆ ಮತ್ತು ನೈರ್ಮಲ್ಯ ಮತ್ತು ವಿದ್ಯುತ್ ಮತ್ತು ನೀರಿನ ಬಳಕೆ ಶುಲ್ಕವನ್ನು ವಿದ್ಯಾರ್ಥಿಗಲೇ ಪಾವತಿಸಬೇಕು ಎಂದು ವಿಶ್ವವಿದ್ಯಾಲಯದ ಪ್ರಾಧಿಕಾರ ಘೋಷಿಸಿದ ನಂತರ ಪ್ರತಿಭಟನೆಯ ಕಾವು ಹೆಚ್ಚಿದೆ.
ವಿದ್ಯಾರ್ಥಿಗಳ ಈ ಪ್ರತಿಭಟನೆಯನ್ನು ನಾನು ಶ್ಲಾಘಿಸುತ್ತೇನೆ, ವೈಯಕ್ತಿಕವಾಗಿ ಸಮರ್ಥನೆ ಎಂದು ಪರಿಗಣಿಸುತ್ತೇನೆ. ಸೆಮಿಸ್ಟರ್‌ನಲ್ಲಿ ಪೂರ್ಣಗೊಳ್ಳಬೇಕಿದ್ದ ಸಾಕಷ್ಟು ಶೈಕ್ಷಣಿಕ ಕಾರ್ಯಗಳು ಇನ್ನೂ ಮುಗಿದಿಲ್ಲ ಅಥವಾ ಈಗಾಗಲೇ ನಡೆಯಬೇಕಿದ್ದ ಪರೀಕ್ಷೆಗಳು ಸಮಯಕ್ಕೆ ಸರಿಯಾಗಿ ನಡೆದಿಲ್ಲ. ಈ ತಿಂಗಳ ಆರಂಭದಲ್ಲಿ ಪ್ರಾರಂಭವಾಗಬೇಕಿದ್ದ ಹೊಸ ಸೆಮಿಸ್ಟರ್‌ಗೆ ಸುಮಾರು 70 ಪ್ರತಿಶತದಷ್ಟು ವಿದ್ಯಾರ್ಥಿಗಳು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿಲ್ಲ.
ಇದೆಲ್ಲದರ ನಡುವೆ, ಭಾನುವಾರ ರಾತ್ರಿ ಮುಸುಖುಧಾರಿ ಅಪರಿಚಿತ ವ್ಯಕ್ತಿಗಳು ಬಡಿಗೆ, ಕೋಲು ಮತ್ತು ಇತರ ಆಯುಧಗಳೊಂದಿಗೆ ಹಾಸ್ಟೆಲ್ ಒಳಗೆ ಪ್ರವೇಶಿಸಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಮೇಲೆ ಹಲ್ಲೆ ನಡೆಸಿದ್ದು, ಘಟನೆಯಲ್ಲಿ ಹಲವಾರು ಮಂದಿ ಗಾಯಗೊಂಡರು. ಈ ಹೊಡೆದಾಟದ ಕುರಿತು ಪ್ರತ್ಯಕ್ಷದರ್ಶಿಗಳ ಹೇಳಿಕೆ ಮತ್ತು ಛಾಯಾಚಿತ್ರ ಸಾಕ್ಷ್ಯಗಳ ಹೊರತಾಗಿಯೂ, 70ಕ್ಕೂ ಅಧಿಕ ದಾಳಿಕೋರರಲ್ಲಿ ಯಾರನ್ನೂ ಈವರೆಗೆ ನೇರವಾಗಿ ಕೇಂದ್ರ ಗೃಹ ಸಚಿವಾಲಯಕ್ಕೆ ವರದಿ ಮಾಡಿಕೊಳ್ಳುವ ದೆಹಲಿ ಪೊಲೀಸರು ಪತ್ತೆ ಮಾಡಿಲ್ಲ ಅಥವಾ ಬಂಧಿಸಿಲ್ಲ. ಅದಕ್ಕಾಗಿ ಇಡೀ ದೇಶವೇ ಆಕ್ರೋಶಗೊಂಡಿದೆ.
ಜೆಎನ್‌ಯು ಬಿಕ್ಕಟ್ಟು ಹಿಂದಿನ ರಾಜಕೀಯ
ಜೆಎನ್‌ಯುವನ್ನು ಯಾವಾಗಲೂ ಭಾರತೀಯ ಬಲಪಂಥೀಯ ಒಕ್ಕೂಟದ ವಿರೋಧಿ ಎಂದು ಪರಿಗಣಿಸಲಾಗುತ್ತದೆ. ನಿರಂತರವಾಗಿರುವ ಈ ಅಭಿಪ್ರಾಯಕ್ಕೆ ಮತ್ತು ಇಡೀ ವಿಶ್ವವಿದ್ಯಾಲಯವನ್ನು ಹೀಗೆ ಆಡಳಿತಾರೂಢ ಸರ್ಕಾರದ ವಿರೋಧಿಯಾಗಿ ರೂಪಿಸಿದ ಹಿಂದಿನ ಸೈದ್ದಾಂತಿಕ ವ್ಯಕ್ತಿಗಳಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ. ಹಿಂದಿನ ಕಾಂಗ್ರೆಸ್ ಪಕ್ಷ ಅಥವಾ ಕೇಂದ್ರಲ್ಲಿದ್ದ ಸಮ್ಮಿಶ್ರ ಸರ್ಕಾರ, ಜೆಎನ್‌ಯುನ ಪ್ರಭಾವಿ ಬೌದ್ಧಿಕ ಸಮುದಾಯದಿಂದ ಬಂದ ಟೀಕೆಗಳ ಹೊರತಾಗಿಯೂ, ಜೆಎನ್‌ಯು ಆಡಳಿತ ವ್ಯವಸ್ಥೆಯೊಂದಿಗೆ ಸಹಕರಿಸಿತು ಅಥವಾ ಜೆಎನ್‌ಯುವನ್ನು ತನ್ನ ಪಾಡಿಗೆ ತಾನು ದೂರ ಇರಲು ಬಿಟ್ಟುಬಿಟ್ಟಿತು. ಆದರೆ ಮೋದಿ-ಸರ್ಕಾರವು ಈ ವಿಷಯದಲ್ಲಿ ವಿಭಿನ್ನ ನೀತಿಯನ್ನು ಅಳವಡಿಸಿಕೊಂಡಿದ್ದು, ಜೆಎನ್‌ಯು ಆವರಣದ ಬೋಧಕವರ್ಗ ಮತ್ತು ವಿದ್ಯಾರ್ಥಿಗಳನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಯತ್ನಿಸುತ್ತಿದೆ ಮತ್ತು ಜೆಎನ್‌ಯುವನ್ನು ರಾಷ್ಟ್ರ ವಿರೋಧಿ ವಿಶ್ವವಿದ್ಯಾಲಯವಾಗಿ ಬಿಂಬಿಸುವ ಯತ್ನ ಮಾಡುತ್ತಿದೆ.
ಜೆಎನ್‌ಯು ಬಿಕ್ಕಟ್ಟು ಕೇಂದ್ರದಲ್ಲಿನ ಬಿಜೆಪಿ ಆಡಳಿತಕ್ಕೆ ರಾಜಕೀಯ ಲಾಭ ನೀಡದೇ ಇರುವುದಿಲ್ಲ. ಭಾರಿ ಆರ್ಥಿಕ ಕುಸಿತ, ನಿರುದ್ಯೋಗ ಪ್ರಮಾಣ ಆಗಸದೆತ್ತರಕ್ಕೆ ಏರುತ್ತಿರುವುದು ಮತ್ತು ರಾಜ್ಯ ಚುನಾವಣೆಗಳಲ್ಲಿನ ಸತತ ಸೋಲುಗಳಿಂದ ಕಂಗೆಟ್ಟ ಬಿಜೆಪಿ, ತನ್ನ ಬಲವರ್ಧನೆಗೆ ಜೆಎಎನ್‌ಯು ವಿವಾದವನ್ನು ದಾಳವಾಗಿ ಬಳಸಿಕೊಳ್ಳುತ್ತಿದೆ.