ಹೈದರಾಬಾದ್: ಕೊರೊನಾ ವೈರಸ್ ಸಂಕಷ್ಟ ಹರಡದಂತೆ ತಡೆಯುವ ನಿಟ್ಟಿನಲ್ಲಿ ಹಲವಾರು ದೇಶಗಳು ತೀವ್ರ ಪ್ರತಿಬಂಧಕ ಕ್ರಮಗಳನ್ನು ಕೈಗೊಳ್ಳುತ್ತಿವೆ. ಆದರೆ, ಇಂತಹ ಕ್ರಮಗಳು ಜನರ ಮಾನಸಿಕ ಆರೋಗ್ಯ ಹಾಗೂ ಸ್ವಾಸ್ಥ್ಯದ ಮೇಲೆ ಋಣಾತ್ಮಕ ಪರಿಣಾಮಗಳನ್ನು ಬೀರುವ ಸಾಧ್ಯತೆಗಳೂ ಇವೆ.
ಕೊರೊನಾ ವೈರಸ್ ಹಬ್ಬುತ್ತಿರುವ ಈ ಅನಿಶ್ಚಯದ ಕಾಲದಲ್ಲಿ, ಪ್ರತಿಯೊಂದು ವಿಷಯವೂ ನಮ್ಮ ಕೈತಪ್ಪಿ ಹೋಗುತ್ತದೇನೋ ಎಂದು ಅನಿಸುವ ಸಾಧ್ಯತೆಗಳು ದಟ್ಟವಾಗಿವೆ. ನಮ್ಮೆಲ್ಲರ ಬಹುತೇಕ ರೂಢಿಗಳು ಅಸ್ತವ್ಯಸ್ತವಾಗಿದ್ದು, ತಜ್ಞರು ಹೇಳುವಂತೆ ಭವಿಷ್ಯ ಕೂಡಾ ಯಾವುದೇ ನಿಶ್ಚಿತತೆಯನ್ನು ಹೊಂದಿಲ್ಲ. ಕೊರೊನಾ ವೈರಸ್ ಕುರಿತ ಎಚ್ಚರಿಕೆಗಳಾದ- “ಮನೆಯೊಳಗೇ ಇರಿ” ಎಂಬುದರಿಂದ ಹಿಡಿದು “ನಿಮ್ಮ ಕೈಗಳನ್ನು ತೊಳೆಯಿರಿ”, “ಸಾಮಾಜಿಕ ಕೂಟಗಳನ್ನು ರದ್ದು ಮಾಡಿ”- ಎಂಬಂತಹ ಸೂತ್ರಗಳನ್ನು ಜಗತ್ತು ಬಹುತೇಕ ಒಪ್ಪಿಕೊಂಡಾಗಿದೆ. ಆದರೆ, ದಿಗ್ಬಂಧನದಲ್ಲಿ ವಾರಗಟ್ಟಲೇ ಇದ್ದುರಿಂದ ಜನರ ಮನಸ್ಸಿನಲ್ಲಿ ಆತಂಕ ಹೆಚ್ಚುತ್ತಿದ್ದು, ಅವರ ಮಾನಸಿಕ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮವಾಗದಂತೆ ನೋಡಿಕೊಳ್ಳಬೇಕಿದೆ.
ಕೊರೊನಾ ವೈರಸ್ ಹರಡುವಿಕೆಯನ್ನು ನಿರ್ಬಂಧಿಸಲು ಸರಕಾರಗಳು ಕೈಗೊಂಡಿರುವ ಕ್ರಮಗಳು ಅಸಾಮಾನ್ಯವಾಗಿವೆ. ಶಾಲೆಗಳನ್ನು ಮುಚ್ಚಲಾಗಿದ್ದು, ವಾಣಿಜ್ಯ ವಹಿವಾಟುಗಳು, ಪ್ರಯಾಣ ಮುಂತಾದವನ್ನು ನಿರ್ಬಂಧಿಸಲಾಗಿದೆ. ಮಂಕಾದ ಆರ್ಥಿಕತೆ ಮತ್ತು ಸ್ಥಗಿತಗೊಂಡಿರುವ ಸಾಮಾಜಿಕ ವ್ಯವಸ್ಥೆಯು ಸಾರ್ವಜನಿಕ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮಗಳಿಗೆ ಕಾರಣವಾಗಬಹುದು ಎಂದು ಕೆಲ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.
ಕೊರೊನಾ ಶಂಕೆ ದೃಢಪಟ್ಟಿರುವ ಕಾರಣ ಅಥವಾ ಸೋಂಕು ತಗಲಬಹುದು ಎಂಬ ಕಾರಣಕ್ಕೆ ಹೆಚ್ಚೆಚ್ಚು ಜನರು ಗೃಹ ದಿಗ್ಬಂಧನ ಅಥವಾ ಪ್ರತ್ಯೇಕವಾಗಿ ಇರಬೇಕಾದ ಅನಿವಾರ್ಯತೆಗೆ ಸಿಲುಕುತ್ತಿದ್ದಾರೆ. ಸಾಂಕ್ರಾಮಿಕದಿಂದಾಗಿ ಜನರ ಮೇಲೆ ಉಂಟಾಗುತ್ತಿರುವ ಮಾನಸಿಕ ಆರೋಗ್ಯದ ಮೇಲಿನ ಪರಿಣಾಮಗಳನ್ನು ಗಮನಿಸುವ ಮಹತ್ವವನ್ನು ತಜ್ಞರು ಈಗ ಮನಗಂಡಿದ್ದು, ಸಾರ್ವಜನಿಕರಿಗೆ ಮಾನಸಿಕ ಬೆಂಬಲ ಸೂಚಿಸುವ ಅವಶ್ಯಕತೆಯನ್ನು ಪ್ರಸ್ತಾಪಿಸಿದ್ದಾರೆ.