ನವದೆಹಲಿ: ಮಧ್ಯಪ್ರದೇಶ ರಾಜಕೀಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಬಂಡಾಯ ಕಾಂಗ್ರೆಸ್ ಶಾಸಕರ ಮೇಲೆ ಕಣ್ಣಿಡಲು ಸ್ವತಂತ್ರ ವೀಕ್ಷಕರ ನೇಮಕಕ್ಕೆ ಸುಪ್ರೀಂಕೋರ್ಟ್ ಒಲವು ವ್ಯಕ್ತಪಡಿಸಿದೆ.
ವಿಶ್ವಾಸ ಮತಯಾಚನೆ ಮಾಡುವಂತೆ ಮಧ್ಯಪ್ರದೇಶ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಬಿಜೆಪಿ ನಾಯಕರು ಸಲ್ಲಿಸಿದ್ದ ಅರ್ಜಿ ವಿಚಾರಣೆ ಇಂದು ಸುಪ್ರೀಂಕೋರ್ಟಿನಲ್ಲಿ ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್ ಮತ್ತು ಹೇಮಂತ ಗುಪ್ತಾ ನೇತೃತ್ವದ ಪೀಠದಲ್ಲಿ ನಡೆಯಿತು.
ಮಧ್ಯಪ್ರದೇಶ ವಿಧಾನಸಭಾ ಸ್ಪೀಕರ್ ಪರವಾಗಿ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ಅಭಿಷೇಕ ಮನು ಸಿಂಘ್ವಿ, ಈಗ ಸರ್ಕಾರ ವಿಶ್ವಾಸ ಮತಯಾಚನೆ ಮಾಡುವಂತೆ ಸೂಚಿಸುವುದು ಸ್ಪೀಕರ್ ಅವರ ಹಕ್ಕುಗಳ ಉಲ್ಲಂಘನೆಯಾಗುತ್ತದೆ. ಶಾಸಕರ ಗೈರು ಹಾಜರಿಯಿಂದ ಸದನದ ಸಂಖ್ಯಾಬಲವೂ ಕುಗ್ಗಿದೆ ಎಂದರು.
ಒಂದು ವೇಳೆ ವಿಡಿಯೋ ಕಾನ್ಫರೆನ್ಸ್ ಮೂಲಕ ಶಾಸಕರನ್ನು ಹಾಜರುಪಡಿಸಿದಲ್ಲಿ ಸ್ಪೀಕರ್ ಅಭಿಪ್ರಾಯ ಪಡೆಯಲು ಸಾಧ್ಯವಾಗದು ಎಂದು ಸಿಂಘ್ವಿ ಹೇಳಿದರು.
ಬಂಡಾಯ ಶಾಸಕರ ಪರ ವಕೀಲ ಮಣಿಂದರ್ ಸಿಂಗ್ ನ್ಯಾಯಾಲಯದ ಸಲಹೆಗೆ ತಮ್ಮ ಸಹಮತ ವ್ಯಕ್ತಪಡಿಸಿದರು.