ತಿರುಪತಿ:ಶ್ರೀಲಂಕಾದಿಂದ ನೇರವಾಗಿ ಆಂಧ್ರಪ್ರದೇಶಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ ತಿರುಪತಿಗೆ ಭೇಟಿ ನೀಡಿದ್ದು, ನೂತನ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿಗೆ ಶುಭ ಕೋರಿದ್ದಾರೆ
ತಿರುಪತಿಯಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ಮೋದಿ, ಕಳೆದ ಕೆಲವು ವರ್ಷಗಳಿಂದ ತಿರುಪತಿಗೆ ಭೇಟಿ ನೀಡಲು ನಾನು ಅದೃಷ್ಟ ಮಾಡಿದ್ದೇನೆ. ಹೊಸ ಸರ್ಕಾರ ರಚನೆ ಮಾಡಿದ ಬಳಿಕ ವೆಂಕಟೇಶ್ವರನ ಆಶೀರ್ವಾದ ಪಡೆಯಲು ಇಲ್ಲಿಗೆ ಬಂದಿದ್ದೇನೆ. 130 ಕೋಟಿ ಭಾರತೀಯರ ಕನಸುಗಳನ್ನು ಪೂರೈಸಲು ಆಶೀರ್ವದಿಸಬೇಕೆಂದು ತಿಮ್ಮಪ್ಪನಲ್ಲಿ ಪ್ರಾರ್ಥಿಸಿಕೊಳ್ಳುವುದಾಗಿ ಅವರು ಹೇಳಿದ್ರು.
ನಾವು ಚುನಾವಣಾ ಜೀವಿಗಳಲ್ಲ, ರಾಷ್ಟ್ರದ ಜನರ ಸುರಕ್ಷತೆಗೆ, ಭದ್ರತೆಗೆ, ಜನರ ಅಭಿವೃದ್ಧಿಗೆ ಸದಾ ಬದ್ಧರಾಗಿದ್ದೇವೆ. ಈ ಕ್ರೆಡಿಟ್ ದೇಶದಾದ್ಯಂತ ಇರುವ ಪ್ರತೀ ಬಿಜೆಪಿ ಕಾರ್ಯಕರ್ತರಿಗೂ ಸಲ್ಲುತ್ತದೆ. ಅದಕ್ಕಾಗಿಯೇ ಮತದಾರರು ಎರಡನೇ ಬಾರಿಗೆ ನಮ್ಮನ್ನು ಆಯ್ಕೆ ಮಾಡಿದ್ದಾರೆ ಎಂದರು.
ಇದೇ ವೇಳೆ ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿಗೆ ಶುಭಕೋರಿದ ಮೋದಿ, ಆಂಧ್ರಪ್ರದೇಶದ ಅಭಿವೃದ್ದಿಗೆ ಕೆಂದ್ರ ಸರ್ಕಾರ ನಿಮಗೆ ಸದಾ ಬೆಂಬಲ ನೀಡುತ್ತದೆ ಎಂದು ಭರವಸೆ ಕೊಟ್ಟರು. ಅಲ್ಲದೇ ಪ್ರಜಾಪ್ರಭುತ್ವದ ಹಬ್ಬದಲ್ಲಿ ಭಾಗವಹಿಸಿ ತಮ್ಮದೇ ಆದ ಸರ್ಕಾರವನ್ನು ಆಯ್ಕೆ ಮಾಡಿಕೊಂಡ ತಮಿಳುನಾಡು ಮತ್ತು ಆಂಧ್ರಪ್ರದೇಶದ ಜನರನ್ನೂ ಮೋದಿ ಅಭಿನಂದಿಸಿದರು.
ಇದಕ್ಕೂ ಮುನ್ನ, ಶ್ರೀಲಂಕಾದಿಂದ ತಿರುಪತಿಗೆ ಬಂದಿಳಿದ ನರೇಂದ್ರ ಮೋದಿಯವರನ್ನು, ಆಂಧ್ರಪ್ರದೇಶ ಸಿಎಂ ಜಗನ್ ಮೋಹನ್ ರೆಡ್ಡಿ ಸ್ವಾಗತಿಸಿದ್ರು.