ನವದೆಹಲಿ: ಭಾರತ ಮತ್ತು ಅಮೆರಿಕವು ಉತ್ತಮ ರಕ್ಷಣಾ ಪಾಲುದಾರಿಕೆ ಮತ್ತು ವ್ಯಾಪಾರ ಸಂಬಂಧವನ್ನು ಹೊಂದಿದ್ದು, ಇಂದು 142 ಬಿಲಿಯನ್ ಡಾಲರ್ ವಹಿವಾಟು ಹೊಂದಿದೆ. ಆದರೆ, ವಲಸೆ ಮತ್ತು ಪ್ರಸ್ತಾವಿತ ವ್ಯಾಪಾರ ಒಪ್ಪಂದಗಳು ಸೇರಿದಂತೆ ದೀರ್ಘಕಾಲದಿಂದಲೂ ವಿವಾದಗಳೂ ಇವೆ. ಕೆಲವು ವಿವಾದಗಳು ಈಗಲೂ ಹಾಗೆಯೇ ಇವೆ. 2020ರ ಫೆಬ್ರವರಿಯಲ್ಲಿ ಟ್ರಂಪ್ ಭಾರತಕ್ಕೆ ಬಂದಾಗಲೂ ಇವುಗಳಿಗೆ ಸಂಬಂಧಿಸಿದಂತೆ ಒಪ್ಪಂದ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಇತ್ತೀಚೆಗೆ, ಯುಎಸ್‌ಐಎಸ್‌ಪಿಎಫ್ (ಅಮೆರಿಕ ಆಭರತ ಸ್ಟ್ರಾಟೆಜಿಕ್ ಪಾರ್ಟ್ನರ್‌ಶಿಪ್ ಫೋರಂ) ಆಯೋಜಿಸಿದ ಸಮ್ಮೇಳನದಲ್ಲಿ, ಸೀಮಿತ ವ್ಯಾಪಾರ ಒಪ್ಪಂದನ್ನು ನವೆಂಬರ್ ಅಧ್ಯಕ್ಷೀಯ ಚುನಾವಣೆಗೂ ಮುನ್ನ ಮಾಡಿಕೊಳ್ಳುವ ಸಾಧ್ಯತೆಯಿದೆ ಎಂದು ವಾಣಿಜ್ಯ ಮತ್ತು ಉದ್ಯಮ ಸಚಿವ ಪಿಯೂಶ್ ಗೋಯೆಲ್ ಹೇಳಿದ್ದಾರೆ.
ಈ #BattlegroundUSA2020 ಎಪಿಸೋಡ್‌ನಲ್ಲಿ ಹಿರಿಯ ಪತ್ರಕರ್ತೆ ಸ್ಮಿತಾ ಶರ್ಮಾ, ಭಾರತ ಎದುರಿಸುತ್ತಿರುವ ವ್ಯಾಪಾರ ಮತ್ತು ಆರ್ಥಿಕ ಸವಾಲುಗಳ ಕುರಿತು ಹಾಗೂ ಭಾರತಕ್ಕೆ ಟ್ರಂಪ್ ಹಾಗೂ ಬೈಡೆನ್ ಪ್ರಕಾರ ಯಾರೂ ಹೆಚ್ಚು ಅನುಕೂಲಕರ ಎಂಬ ಬಗ್ಗೆ ಚರ್ಚಿಸಿದ್ದಾರೆ.
ಸೀಮಿತ ವ್ಯಾಪಾರ ಒಪ್ಪಂದ ನಡೆಯುವ ಸಾಧ್ಯತೆ ತುಂಬಾ ಕಡಿಮೆ ಇದೆ ಎಂದು ವಾಷಿಂಗ್ಟನ್ ಡಿಸಿಯಲ್ಲಿನ ಹಡ್ಸನ್ ಇನ್‌ಸ್ಟಿಟ್ಯೂಟ್‌ನ ಇಂಡಿಯಾ ಇನಿಶಿಯೇಟಿವ್ ನಿರ್ದೇಶಕಿ ಡಾ. ಅಪರ್ಣಾ ಪಾಂಡೆ ಹೇಳಿದ್ದಾರೆ. ಮುಂದಿನ ತಿಂಗಳುಗಳಲ್ಲಿ ಸಣ್ಣ ಅಥವಾ ಸೂಕ್ಷ್ಮ ಮಟ್ಟದ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕುವ ಬಗ್ಗೆ ನನಗೆ ಖಚಿತತೆ ಇಲ್ಲ. ಆದರೆ, ಭಾರತಕ್ಕೆ ಜಿಎಸ್‌ಪಿ ಅಂದರೆ ಜನರಲೈಸ್ಡ್ ಸಿಸ್ಟಂ ಆಫ್ ಪ್ರಿಫರೆನ್ಸಸ್ ಅನ್ನು ವಾಪಸ್ ನೀಡಬಹುದು. ಈ ಅನುಕೂಲವನ್ನು ಅಮೆರಿಕ ವಾಪಸ್ ಪಡೆದಿತ್ತು. ಇದು ಸುಮಾರು 6 ರಿಂದ 8 ಬಿಲಿಯನ್ ಡಾಲರ್ ಮೌಲ್ಯದ ವಹಿವಾಟು ಆಗುತ್ತದೆ. ಇದನ್ನು ಅಧ್ಯಕ್ಷರು ಸುಗ್ರೀವಾಜ್ಞೆಯ ಮೂಲಕ ಹಿಂಪಡೆದಿದ್ದರು. ಹೀಗಾಗಿ ಮುಂದಿನ ಒಂದೆರಡು ತಿಂಗಳುಗಳಲ್ಲಿ ಇದನ್ನು ಅವರು ಮರಳಿ ಕೊಡಬಹುದು. ಇದನ್ನು ಮಿನಿ ಡೀಲ್ ರೀತಿ ಪರಿಗಣಿಸಬಹುದು” ಎಂದು ಪಾಂಡೆ ಹೇಳಿದ್ದಾರೆ. ಫ್ರಮ್ ಚಾಣಕ್ಯ ಟು ಮೋದಿ ಮತ್ತು ಮೇಕಿಂಗ್ ಇಂಡಿಯಾ ಗ್ರೇಟ್ ಕೃತಿಗಳನ್ನು ಇವರು ರಚಿಸಿದ್ದಾರೆ.
“ಭಾರತ ಮತ್ತು ಅಮೆರಿಕವೆರಡೂ ರಾಷ್ಟ್ರೀಯ ಮತ್ತು ರಕ್ಷಣಾತ್ಮಕವಾಗಿವೆ. ಹೀಗಾಗಿ ವ್ಯಾಪಾರ ಒಪ್ಪಂದವನ್ನು ಮಾಡಿಕೊಳ್ಳುವಲ್ಲಿ ಸಮಸ್ಯೆಯಿದೆ. ಟ್ಯಾರಿಫ್ ಕಿಂಗ್ ಎಂದು ಕರೆದ ದೇಶಕ್ಕೆ ಅನುಕೂಲ ಮಾಡಿಕೊಡುವುದು ಹಾಗೂ ಕೃಷಿ ಸಬ್ಸಿಡಿಗಳು ಹಾಗೂ ಬೌದ್ಧಿಕ ಸ್ವತ್ತು ಹಕ್ಕುಗಳು ಸೇರಿದಂತೆ ಹಲವು ಆಕ್ಷೇಪಗಳನ್ನು ಹೊಂದಿರುವ ದೇಶಕ್ಕೆ ಅನುಕೂಲ ಒದಗಿಸುವುದು ಅಮೆರಿಕ ಫಸ್ಟ್ ನೀತಿಗೆ ವಿರುದ್ಧವಾಗಿದೆ ಹಾಗೂ ಕಷ್ಟವೂ ಆಗಿದೆ. ಹೀಗಾಗಿ, ಮುಂದಿನ ಒಂದೆರಡು ತಿಂಗಳಲ್ಲಿ ಇದನ್ನು ಮಾಡುವುದು ಅಮೆರಿಕದ ಅಧ್ಯಕ್ಷರಿಗೆ ಕಷ್ಟದ್ದಾಗಿದೆ. ಇನ್ನು, ಟ್ರಂಪ್ ಆಗಲೀ ಅಥವಾ ಬೈಡೆನ್ ಆಗಲೀ, ಮುಂದಿನ ಸರ್ಕಾರದಲ್ಲಿ ಇದು ಸಾಧ್ಯವಾಗುತ್ತದೆಯೇ ಎಂಬುದು ನನಗೆ ತಿಳಿದಿಲ್ಲ. ಭಾರತದ ಕಡೆಯೂ ಇದು ಕಷ್ಟಕರವೇ ಆಗಿದೆ. ಭಾರತ ಆರ್ಥಿಕವಾಗಿ ತುಂಬಾ ಬಳಲಿದೆ. ಭಾರತಕ್ಕೆ ತನ್ನ ರೈತರು ಮತ್ತು ಉತ್ಪಾದಕರ ಹಿತ ರಕ್ಷಣೆ ಮಾಡಲು ಕೆಲವು ಟ್ಯಾರಿಫ್‌ಗಳು ಮತ್ತು ತೆರಿಗೆಗಳು ಅತ್ಯಂತ ಅಗತ್ಯವಾಗಿದೆ” ಎಂದು ಅವರು ವಿವರಿಸಿದ್ದಾರೆ.
ಫ್ರಾನ್ಸ್‌ಗೆ ಭಾರತದ ರಾಯಭಾರಿಯಾಗಿದ್ದ ಮತ್ತು ವ್ಯಾಪಾರ ಒಪ್ಪಂದಗಳ ಮಧ್ಯಸ್ಥಿಕೆದಾರ ಮೋಹನ್ ಕುಮಾರ್ ಕೂಡ ಇದೇ ಅನುಮಾನಗಳನ್ನು ವ್ಯಕ್ತಪಡಿಸಿದ್ದಾರೆ. 2021 ರ ಮೊದಲ ತ್ರೈಮಾಸಿಕಕ್ಕೂ ಮೊದಲು ಒಪ್ಪಂದ ನಡೆಯುವ ಸಾಧ್ಯತೆ ಕಡಿಮೆ ಎಂದಿದ್ದಾರೆ. ಭಾರತಕ್ಕೆ ಹೆಚ್ಚು ಕಳವಳ ಇರುವ ಸಂಕೀರ್ಣ ಸಮಸ್ಯೆಗಳನ್ನು ಅವರು ಪ್ರಸ್ತಾಪಿಸಿದ್ದಾರೆ.
“ಅತ್ಯಂತ ಪ್ರಮುಖ ಸಂಗತಿಯೆಂದರೆ, ಅಮೆರಿಕವು ನಮ್ಮನ್ನು ಚೀನಾದ ಸಮಾನರಂತೆ ಪರಿಗಣಿಸುತ್ತಿದೆ ಮತ್ತು ಭಾರತವು ಅಭಿವೃದ್ಧಿಗೊಳ್ಳುತ್ತಿರುವ ದೇಶ ಎಂದು ಪರಿಗಣಿಸುತ್ತಿಲ್ಲ. ನನ್ನಂತಹ ಮಧ್ಯಸ್ಥಿಕೆದಾರರಿಗೆ ಇದು ಆಘಾತಕಾರಿ ವಾದವಾಗಿದೆ. ನೀವು ಸೇಬು ಮತ್ತು ಕಿತ್ತಳೆಯನ್ನು ಹೋಲಿಸುತ್ತಿದ್ದೀರಿ. ಚೀನಾ 13 ಟ್ರಿಲಿಯನ್ ಡಾಲರ್ ಆರ್ಥಿಕತೆ ಹಾಗೂ ನಾವು 2.7 ಟ್ರಿಲಿಯನ್ ಡಾಲರ್ ಆರ್ಥಿಕತೆ ಎಂಬುದು ಎಲ್ಲರಿಗೂ ತಿಳಿದಿದೆ. ಈ ಬಗ್ಗೆ ನಾವು ಮುಂದಿನ ಸರ್ಕಾರಕ್ಕೆ ಮನವೊಲಿಕೆ ಮಾಡಿಕೊಡಬೇಕಿದೆ. ಅದು ಯಾವ ಸರ್ಕಾರವೇ ಆಗಿದ್ದರೂ, ಅದಕ್ಕೆ ನಾವು ಮನವೊಲಿಕೆ ಮಾಡಿಕೊಡಬೇಕಿದೆ” ಎಂದು ಮೋಹನ್ ಕುಮಾರ್ ಹೇಳಿದ್ದಾರೆ. ಇವರು ಆರ್‌ಐಎಸ್ ಎಂಬ ಥಿಂಕ್ ಟ್ಯಾಂಕ್‌ನ ಮುಖ್ಯಸ್ಥರಾಗಿದ್ದಾರೆ ಮತ್ತು ಜಿಂದಾಲ್ ಗ್ಲೋಬಲ್ ಯೂನಿವರ್ಸಿಟಿಯಲ್ಲಿ ಅಂತಾರಾಷ್ಟ್ರೀಯ ಅಧ್ಯಯನಗಳ ಡೀನ್ ಆಗಿದ್ದಾರೆ.