ಶೋಪಿಯಾನ್ (ಜಮ್ಮು-ಕಾಶ್ಮೀರ): ಶೋಪಿಯಾನ್ ಜಿಲ್ಲೆಯಲ್ಲಿ ಇಬ್ಬರು ಅಪರಿಚಿತ ಉಗ್ರರು ಲಾರಿ ಚಾಲಕನ ಮೇಲೆ ದಾಳಿ ಮಾಡಿ ಗುಂಡಿಕ್ಕಿ ಕೊಲೆ ಮಾಡಿದ್ದಲ್ಲದೆ, ಮಾಲೀಕನನ್ನ ಹಿಗ್ಗಾಮುಗ್ಗ ಥಳಿಸಿ ಲಾರಿಗೆ ಬೆಂಕಿ ಹಚ್ಚಿದ್ದಾರೆ.
ಇಬ್ಬರು ಭಯೋತ್ಪಾದಕರು ರಾಜಸ್ಥಾನ ನೋಂದಾಯಿತ ಟ್ರಕ್ ಮೇಲೆ ದಾಳಿ ನಡೆಸಿದ್ದು, ಚಾಲಕ ಶರೀಫ್ ಖಾನ್ ಎಂಬುವರನ್ನ ಕೊಲೆ ಮಾಡಿದ್ದಾರೆ. ಇಬ್ಬರು ಉಗ್ರರ ಪೈಕಿ ಓರ್ವ ಪಾಕಿಸ್ತಾನದವನು ಎಂದು ತಿಳಿದು ಬಂದಿದೆ. ಭಯೋತ್ಪಾದಕರನ್ನು ಪತ್ತೆ ಹಚ್ಚಲು ಈಗಾಗಲೇ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಅಲ್ಲದೆ ಶಿರ್ಮಲ್ ಪ್ರದೇಶದಲ್ಲಿ ಸೇಬು ಹಣ್ಣಿನ ಮಾಲೀಕನನ್ನ ಥಳಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಉಗ್ರರು ಕಾಶ್ಮೀರದಲ್ಲಿ ಅಡಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದ್ದು, ಕಳೆದ ಒಂದು ವಾರದಿಂದ ಹುಡುಕಾಟ ನಡೆಸಲಾಗುತ್ತಿದೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ.
ಇಂದಿನಿಂದಷ್ಟೇ ಜಮ್ಮು ಮತ್ತು ಕಾಶ್ಮೀರದಲ್ಲಿ ಮೊಬೈಲ್ ಸೇವೆಯನ್ನ ಪುನರ್ ಆರಂಭಿಸಲಾಗಿದೆ. ಈ ಬೆನ್ನಲ್ಲೇ ಉಗ್ರರು ದುಷ್ಕೃತ್ಯ ಮೆರೆದಿದ್ದಾರೆ. ಈಗಾಗಲೇ ಗುಪ್ತಚರ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, ಭಾರತದ ಪ್ರಮುಖ ನಗರಗಳ ಮೇಲೆ ದಾಳಿ ನಡೆಸಲು ಪಾಕಿಸ್ತಾನ ಬಾಲಾಕೋಟ್ನಲ್ಲಿ ಉಗ್ರರಿಗೆ ತರಬೇತಿ ನೀಡಲಾಗುತ್ತಿದೆ ಎಂಬ ಮಾಹಿತಿ ಹೊರಬಿದ್ದಿದೆ.