ಮುಕುಂದವಾಡಿ( ಔರಂಗಾಬಾದ್) : ಈ ಪುಟ್ಟ ಬಾಲಕನ ಹೆಗಲ ಮೇಲೆ ಕುಟುಂಬಕ್ಕೆ ನೀರು ಒದಗಿಸಬೇಕಾದ ಕಷ್ಟಕರವಾದ ಸವಾಲಿದೆ. ಈ 10 ವರ್ಷದ ಬಾಲಕ ನಿತ್ಯ ತನ್ನ ಓದು ಬಿಟ್ಟು ಕೇವಲ ಎರಡೇ ಎರಡು ಕ್ಯಾನ್ ನೀರಿಗಾಗಿ 14 ಕಿ.ಮೀ ದೂರ ಅಲೆಯಬೇಕಾದ ಅಗತ್ಯವಿದೆ.
ಇಂತಹ ಪರಿಸ್ಥಿತಿ ಇರೋದು ನೆರೆಯ ರಾಜ್ಯ ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯಲ್ಲಿ... ಹೀಗೆ ಈ ಹತ್ತು ವರ್ಷದ ಬಾಲಕನೊಬ್ಬನ ಪರಿಸ್ಥಿತಿ ಅಷ್ಟೇ ಅಲ್ಲ.. ಹೀಗೆ ಹಲವು ವಿದ್ಯಾರ್ಥಿಗಳ ನಿತ್ಯದ ಗೋಳು ಇದಾಗಿದೆ. ಕೇವಲ ಸಿದ್ದಾರ್ಥ ಅಷ್ಟೇ ಅಲ್ಲ, 12 ವರ್ಷದ ಆಯೇಷಾ, 7 ವರ್ಷದ ಸಾಕ್ಷಿ ಹೀಗೆ ಹಲವರು ಜೀವ ಜಲಕ್ಕಾಗಿ ದಿನವಿಡೀ ಶಾಲೆ ಬಿಟ್ಟು ನೀರಿಗಾಗಿ ತಮ್ಮ ಬದುಕನ್ನ ಸವೆಸುತ್ತಿದ್ದಾರೆ.
ಮರಾಠವಾಡ ಪ್ರಾಂತ್ಯದ ಸುಮಾರು 7 ಸಾವಿರ ಹಳ್ಳಿಗಳು ಹನಿ ನೀರಿಗಾಗಿ ಪರಿತಪಿಸಬೇಕಾದ ಸ್ಥಿತಿ ತಲೆದೋರಿದೆ. ಇಲ್ಲಿ ಮಕ್ಕಳು, ಮಹಿಳೆಯರು ವೃದ್ಧರೆನ್ನದೇ ಹಲವಾರು ಕಿ.ಮೀ ವರೆಗೂ ನೀರಿಗಾಗಿ ಅಲೆದಾಡಬೇಕಿದೆ.
ಈ ಬಾಲಕ ಸಿದ್ದಾರ್ಥನ ನಿತ್ಯದ ಕೆಲಸವೇನು ಗೊತ್ತೆ?
ಸಿದ್ದಾರ್ಥ ಕೇವಲ 2 ಕ್ಯಾನ್ ನೀರಿಗಾಗಿ ಬೆಳಗ್ಗೆ 11:30ಕ್ಕೆ ಮನೆ ಬಿಡ್ತಾನೆ. ಅದು ಮುಕುಂದವಾಡಿ ರೈಲ್ವೆ ಸ್ಟೇಷನ್ಗೆ ನಡೆದುಕೊಂಡೇ ಹೋಗಬೇಕಿದೆ. ಅಲ್ಲಿಂದ ಬಾಲಕ ಔರಂಗಾಬಾದ್ ಸ್ಟೇಷನ್ಗೆ ತೆರಳಿ ಅಲ್ಲಿ ಎರಡು ಕ್ಯಾನ್ ನೀರು ತುಂಬಿಸುತ್ತಾನೆ. ಇದಕ್ಕಾಗಿ ಆತ ಕೇವಲ 40 ನಿಮಿಷ ವ್ಯಯಿಸುತ್ತಾನೆ. ಆದರೆ ಆತ ಮತ್ತೊಂದು ರೈಲು ಹಿಡಿದು ವಾಪಸ್ ಮನೆಗೆ ಬರುವಷ್ಟರಲ್ಲಿ ಸಂಜೆ 5:30ಗಂಟೆ ಆಗುತ್ತೆ. ಅಲ್ಲಿಗೆ ಆತನ ವಿದ್ಯಾಭ್ಯಾಸವೂ ಖತಂ.. ಹನಿ ನೀರಿಗಾಗಿ ಆತನ ದಿನದ ಸಮಯ ಮುಕ್ತಾಯವಾಗುತ್ತೆ.
7 ಕಿಮೀ ಪ್ರಯಾಣದ ಹಾದಿ ಕ್ರಮಿಸಿ, ಮತ್ತೆ ಮನೆಗೆ ಮರಳಲು 7 ಕೀಮೀ ಹಿಂದಕ್ಕೆ ಬರಲು ಊರಿನ ರೈಲಿಗಾಗಿ ದಿನವಿಡಿ ಮರದ ಕೆಳಗೋ ಅಲ್ಲಿ ಇಲ್ಲಿ ಅಲೆದಾಡಿ ರೈಲು ಬಂದ ತಕ್ಷಣ ಹತ್ತಿಕೊಂಡು ಬರಬೇಕಿದೆ. ಇದಕ್ಕಾಗಿ ಈ ಎಳೆಯ ಮಕ್ಕಳು ಊಟ ಇಲ್ಲದೇ ದಿನ ದೂಡಬೇಕಾದ ಪರಿಸ್ಥಿತಿ ಇದೆ.
5-6 ದಿನಕ್ಕೊಮ್ಮೆ ನೀರು ಬಿಡುವ ಕಾರ್ಪೋರೇಷನ್
ಭಾರಿ ಆಘಾತಕಾರಿ ವಿಷಯ ಎಂದರೆ ಸಿದ್ಧಾರ್ಥ ವಾಸಿಸುವ ನಿರ್ಮಲಾ ದೇವಿ ನಗರ ಔರಂಗಾಬಾದ್ ಮುನಿಪಾಲಿಟಿಯಿಂದ ಯಾವುದೇ ನೀರು ಪೂರೈಕೆ ವ್ಯವಸ್ಥೆ ಇಲ್ಲ. ಇಲ್ಲಿ ಸುಮಾರು 300 ಕುಟುಂಬಗಳು ವಾಸ ಮಾಡ್ತಿವೆ. ಬಹುತೇಕರು ಕೂಲಿ ಕಾರ್ಮಿಕರೇ ಆಗಿದ್ದಾರೆ. ಇಲ್ಲಿ ಜನ 60 ರೂ. ನೀಡಿ 200 ಲೀಟರ್ ಸಾಮರ್ಥ್ಯದ ಡ್ರಮ್ ಕೊಂಡುಕೊಳ್ಳುತ್ತಾರೆ. ಇಲ್ಲಿ ಬೋರ್ವೆಲ್ ಕೊರೆದರೂ ಹನಿ ನೀರು ಸಿಗುತ್ತಿಲ್ಲ. ಮುನ್ಸಿಪಲ್ ನೀರೂ ಸಹ 5-6 ದಿನಕ್ಕೊಮ್ಮೆ ಬರುತ್ತೆ. ಹೀಗಾಗಿ ಇಲ್ಲಿನ ಜನ ನೀರಿಗಾಗಿ ಸಂಕಷ್ಟಪಡ್ತಿದ್ದಾರೆ.
ಇದು ಇವತ್ತಿನ ಬವಣೆಯಲ್ಲ ಕಳೆದ 7-8 ವರ್ಷಗಳಿಂದ ಇಲ್ಲಿನ ಜನರ ಪರಿಸ್ಥಿತಿ ಹೀಗೆ ಇದೆ. ಆದರೆ ಈ ಬಗ್ಗೆ ಗಮನ ಹರಿಸುವವರೇ ಇಲ್ಲ ಎನ್ನುವಂತಾಗಿದೆ ಎನ್ನುವುದು ಸ್ಥಳೀಯರ ಅಳಲು..