ನವದೆಹಲಿ:"ಎತ್ತಣ ಮಾಮರ ಎತ್ತಣ ಕೋಗಿಲೆ ಎತ್ತಣಿಂದೆತ್ತ ಸಂಬಂಧವಯ್ಯಾ? ಬೆಟ್ಟದ ಮೇಲಣ ನೆಲ್ಲಿಯ ಕಾಯಿ, ಸಮುದ್ರದೊಳಗಣ ಉಪ್ಪು ಎತ್ತಣದಿಂದೆತ್ತ ಸಂಬಂಧವಯ್ಯಾ?" ಎಂಬ ವಚನಕಾರ ಅಲ್ಲಮಪ್ರಭು ಅವರ ಎರಡು ವ್ಯಕ್ತ ರೂಪಕಗಳು ಅವ್ಯಕ್ತ ಪ್ರತಿಮೆಗಳನ್ನು ಪ್ರಶ್ನಿಸುತ್ತದೆ. ಅಂತಹದೇ ಅವ್ಯಕ್ತ ರೂಪಕ ಆಕಾಶದಲ್ಲಿ ಹಾರಾಡುವ ವಿಮಾನಕ್ಕೂ ನೆಲದ ಮೇಲಣ ಮಾವಿನ ಹಣ್ಣಿಗೂ ಸಾಮರಸ್ಯವಿದೆ ಎಂಬುದು ಇಲ್ಲಿ ಧ್ವನಿಸುತ್ತದೆ.
ಸಾವಿರಾರು ಕೋಟಿ ರೂಪಾಯಿ ಆರ್ಥಿಕ ನಷ್ಟದಿಂದ ದಿವಾಳಿಯಾಗಿ ವಾಯುಯಾನ ಸೇವೆಯಿಂದಲೇ ಹಿಂದೆ ಸರಿದ ಜೆಟ್ ಏರ್ವೇಸ್ ಸಂಸ್ಥೆ, ಮಾವು ಬೆಳಗಾರರನ್ನು ತೀವ್ರ ಕಂಗಾಲು ಆಗುವಂತೆ ಮಾಡಿದೆ. 'ಹಣ್ಣುಗಳ ರಾಜ'ನೆಂದೇ ಪ್ರಸಿದ್ಧಿಯಾದ ಮಾವು, ಈ ವರ್ಷದಲ್ಲಿ ಬೆಲೆ ಕಳೆದುಕೊಂಡ 'ಬೀದಿ ರಾಜ'ನಾಗಿದ್ದಾನೆ. ಇದಕ್ಕೆ ಕಾರಣ ಜೆಟ್ ಏರ್ವೇಸ್ ಸೇವೆಯಿಂದ ಹಿಂದಕ್ಕೆ ಸರಿದಿದ್ದು.
ಭಾರತದ ಮಾವಿನ ಹಣ್ಣುಗಳಿಗೆ ಅಮೆರಿಕ, ಗಲ್ಫ್ ಮತ್ತು ಇಂಗ್ಲೆಂಡ್ನಲ್ಲಿ ಅತಿಹೆಚ್ಚಿನ ಬೇಡಿಕೆ ಇದೆ. ಜೆಟ್ ಸಂಸ್ಥೆ, ರೈತರ ಹಾಗೂ ದಲ್ಲಾಳಿಗಳ ಮೂಲಕ ಯಥೇಚ್ಛ ಪ್ರಮಾಣದಲ್ಲಿ ಮಾವುಗಳನ್ನು ಈ ರಾಷ್ಟ್ರಗಳಿಗೆ ಕಡಿಮೆ ಸಾಗಣೆ ಶುಲ್ಕದಲ್ಲಿ ಸಾಗಿಸುತ್ತಿತ್ತು. ಇದು ರೈತರ ಆದಾಯಕ್ಕೂ ನೆರವಾಗುತ್ತಿತ್ತು. ಕಳೆದ ವರ್ಷ ಪ್ರತಿ ಕೆ.ಜಿ. ಮಾವು ಸಾಗಣೆಗೆ ₹ 80ರಿಂದ ₹ 85 ಶುಲ್ಕ ವಸೂಲಿ ಮಾಡುತ್ತಿತ್ತು. ಸೇವೆಯಿಂದ ಹೊರ ಹೋದ ಬಳಿಕ ಇತರ ಸಂಸ್ಥೆಗಳು ಈಗ, ಪ್ರತಿ ಕೆ.ಜಿ.ಯ ಸಾಗಣೆ ಶುಲ್ಕವನ್ನು ₹ 105ರಿಂದ ₹115ಕ್ಕೆ ಏರಿಕೆ ಮಾಡಿವೆ. ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ಇದೇ ಪ್ರಮಾಣದ ಮಾವಿಗೆ ₹ 128ವರೆಗೂ ದರ ವಿಧಿಸುತ್ತಿವೆ. ಹೀಗಾಗಿ, ಸಾಗರೋತ್ತರ ಮಾರುಕಟ್ಟೆಗಳಲ್ಲಿ ಈ ಹಿಂದಿನ ಬೆಲೆಗಿಂತ 1-1.5 ಡಾಲರ್ ಹೆಚ್ಚುವರಿಯಾಗಿ ಬಿಕರಿಯಾಗುತ್ತಿದ್ದು, ಬೇಡಿಕ ಸಹ ಇಲ್ಲವಾಗುತ್ತಿದೆ.
ಕಳೆದ ಕೆಲವು ತಿಂಗಳಿಂದ ಕಡಿಮೆ ವಿಮಾನಯಾನ ಬೆಳವಣಿಗೆ ಕುಂಠಿತವಾಗುತ್ತಿದೆ. ಇದರಿಂದ ಹೊರ ಬರಲು ವಿಮಾನಯಾನ ಸಂಸ್ಥೆಗಳು ಬೇಡಿಕೆ ಹೆಚ್ಚಾದ ಸೇವೆಗಳಿಗೆ ಹೆಚ್ಚುವರಿ ದರ ವಿಧಿಸುತ್ತಿವೆ. ಅದೆ ರೀತಿ ಮಾವು ಕೂಡ ಶುಲ್ಕ ಏರಿಕೆಯ ಅವಕೃಪೆಗೆ ಒಳಗಾಗಿದ್ದು, ಇದರಿಂದ ರೈತರು ಹಾಗೂ ದಲ್ಲಾಳಿಗಳು ರಫ್ತುವನ್ನೇ ಕೈಬಿಟ್ಟಿದ್ದಾರೆ. ಪರಿಣಾಮ ದೇಶಿಯ ಮಾವು ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ. ಮಾವಿನ ಮೇಲೆ ಶೇ 40ರಷ್ಟು ಬೆಲೆ ಕ್ಷೀಣಿಸಿದೆ.
ಪ್ರಸಕ್ತ ವರ್ಷದ ಮಾವು ರಫ್ತಿನಿಂದ ಭಾರತಕ್ಕೆ ನೂರಾರು ಕೋಟಿ ರೂ. ನಷ್ಟವಾಗಿದೆ. ಇದರ ಲಾಭವನ್ನು ನೆರೆಯ ಚೀನಾ, ಪಾಕಿಸ್ತಾನ ದೂರದ ಮೆಕ್ಸಿಕೋ ಹಾಗೂ ಥಾಯ್ಲೆಂಡ್ ಪಡೆಯುತ್ತಿವೆ. ಕಳೆದ ವರ್ಷ 49 ಸಾವಿರ ಮೆಟ್ರಿಕ್ ಟನ್ ಮಾವು ರಫ್ತಾಗಿ 416 ಕೋಟಿಯಷ್ಟು ವಹಿವಾಟು ನಡೆಸಿತ್ತು.