ಕರ್ನಾಟಕ

karnataka

ETV Bharat / bharat

ಕಾಣಿಪಾಕಂ ಸ್ವಯಂಭು ಗಣೇಶನ ಮಂದಿರ: ವಿನಾಯಕ ಉದ್ಭವಿಸಿದ ರೋಚಕ ಸ್ಥಳವಿದು..! - Kaanipaakam

ಆಂಧ್ರಪ್ರದೇಶದ ಚಿತ್ತೂರಿನ ವಿಹಾರಿಪುರ ಗ್ರಾಮದಲ್ಲಿರುವ ಕಾಣಿಪಾಕಂ ಗಣೇಶನ ದೇವಾಲಯ ಒಂದು ಪವಿತ್ರ ತಾಣ. ಇಲ್ಲಿನ ಗಣೇಶ ಉದ್ಭವ ಮೂರ್ತಿವಾಗಿದ್ದು, ದೇವಸ್ಥಾನದ ಉತ್ತರಕ್ಕೆ ಬಹುದಾ ನದಿ ಪ್ರವಹಿಸುತ್ತದೆ.

temple of Sri Varasiddhi Vinayakudu
ಕಾಣಿಪಾಕಂ ಸ್ವಯಂಭು ಗಣೇಶನ ಮಂದಿರ

By

Published : Aug 25, 2020, 6:10 AM IST

ಕಾಣಿಪಾಕಂ(ಆಂಧ್ರ ಪ್ರದೇಶ):ಭಾರತದಲ್ಲಿ ಅನೇಕ ಗಣೇಶನ ದೇವಾಲಯಗಳಿದ್ದು, ವಿನಾಯಕನ ಕುರಿತು ವಿಶೇಷತೆಗಳು ಕೂಡ ಹಲವಾರಿವೆ. ಇವುಗಳ ಪೈಕಿ ಆಂಧ್ರಪ್ರದೇಶದ ಚಿತ್ತೂರಿನ ವಿಹಾರಿಪುರ ಗ್ರಾಮದಲ್ಲಿರುವ ಕಾಣಿಪಾಕಂ ಗಣೇಶನ ದೇವಾಲಯ ಕೂಡ ಒಂದಾಗಿದೆ.

ಗಣಗಳ ಅಧಿಪತಿ. ವಿಶೇಷ ಭಕ್ತ ಗಣ ಕೂಟವನ್ನು ಹೊಂದಿರುವ, ಕಾಣಿಪಾಕಂ ಗಣೇಶನ ದೇವಾಲಯ ಒಂದು ವಿಶಿಷ್ಠವಾದ ಮಂದಿರ. ಇಲ್ಲಿನ ಗಣೇಶ ಉದ್ಭವ ಮೂರ್ತಿವಾಗಿದ್ದು, ದೇವಸ್ಥಾನದ ಉತ್ತರಕ್ಕೆ ಬಹುದಾ ನದಿ ಪ್ರವಹಿಸುತ್ತಿದ್ದು, ಸುಮಾರು ಸಾವಿರ ವರ್ಷಗಳ ಹಿಂದೆ ವರಸಿದ್ಧಿ ವಿನಾಯಕ ದೇವಾಲಯವನ್ನು ನಿರ್ಮಿಸಲಾಗಿದೆ ಎಂಬುದಕ್ಕೆ ಐತಿಹಾಸಿಕ ಪುರಾವೆಗಳಿವೆ.

ಕಾಣಿಪಾಕಂ ಸ್ವಯಂಭು ಗಣೇಶನ ಮಂದಿರ

ಹಿಂದೆ ವಿಹಾರಿಪುರ ಗ್ರಾಮದಲ್ಲಿ ಸತ್ಯ ಮತ್ತು ಧರ್ಮನಿಷ್ಠರಾದ ಮೂವರು ಸಹೋದರರು ವಾಸಿಸುತ್ತಿದ್ದರು. ಕುರುಡ, ಮೂಕ ಹಾಗೂ ಕಿವುಡರಾಗಿ ಜನಿಸಿದ ಆ ಮೂರು ಜನ ಅಣ್ಣ ತಮ್ಮಂದಿರು, ತಮ್ಮ ಜಮೀನಿನಲ್ಲಿ ವ್ಯವಸಾಯ ಮಾಡುತ್ತಾ ಜೀವನ ಸಾಗಿಸುತ್ತಿದ್ದರು.

ಒಂದು ಬಾರಿ ಮಳೆಯ ಅಭಾವದ ಕಾರಣ ಬರಗಾಲದ ಸಮಸ್ಯೆಯಿಂದ ಜನರ ಜೀವನವೆಲ್ಲ ಅಸ್ತವ್ಯಸ್ತವಾಯಿತು. ಕುಡಿಯಲು ಒಂದು ಗುಟುಕು ನೀರು ಸಿಗದೇ ಜನರು ಪರದಾಡಿದರು. ಬರಗಾಲವಿದ್ದ ಕಾರಣ ಆ ಸಹೋದರರು ಬಾವಿಯನ್ನು ಅಗೆಯಲು ಪ್ರಾರಂಭಿಸಿದರು.

ಹೀಗೆ ಬಾವಿಯನ್ನು ತೊಡುತ್ತಿದ್ದಾಗ ಒಂದು ದೊಡ್ಡ ಕಲ್ಲು ಅಡ್ಡ ಬಂದಿತು. ಆ ಕಲ್ಲನ್ನು ಆರೆಯ ಮೂಲಕ ಒಡೆಯಲು ಮುಂದಾದಾಗ ಆ ಬಂಡೆಗೆ ತಗುಲಿದ ಏಟಿನಿಂದ ರಕ್ತ ಹೊರಚಿಮ್ಮಲು ಶುರುವಾಗಿತ್ತು. ಆ ರಕ್ತವು ಆ ಸಹೋದರರ ಮೇಲೆ ಬಿದ್ದ ತಕ್ಷಣ ಅವರ ಎಲ್ಲ ಅಂಗ ವೈಕಲ್ಯವು ಮಾಯವಾಗಿ ಅವರು ಸಾಮಾನ್ಯರಂತಾದರು. ಆ ರಕ್ತವು ಆ ಮೂರು ಸಹೋದರರ ಮೇಲೆ ಬಿದ್ದಾಗ ಅಲ್ಲಿ ಸ್ವಯಂಭು ವಿನಾಯಕನ ಉಧ್ಭವವಾಯಿತು ಎಂದು ಹೇಳಲಾಗುತ್ತದೆ.

ಗಣೇಶ ಉದ್ಭವವಾದ ಸುದ್ದಿ ಊರಿಗೆಲ್ಲಾ ಹರಡುತ್ತಿದ್ದಂತೆಯೇ ಆ ಪ್ರದೇಶಕ್ಕೆ ಜನಸಾಗರ ಹರಿದು ಬಂದಿತು. ಈ ಉದ್ಭವ ಗಣಪತಿಯನ್ನು ನೋಡಿದ ಗ್ರಾಮಸ್ಥರು ತೆಂಗಿನಕಾಯಿ, ಎಳನೀರಿನಿಂದ ವಿಗ್ರಹಕ್ಕೆ ಪೂಜೆ, ಅಭಿಷೇಕಗಳನ್ನು ನೆರವೇರಿಸಿದ್ದರು.

ಭಕ್ತರು ಹೊಡೆದ ತೆಂಗಿನ ಕಾಯಿಯಿಂದ ಅಲ್ಲಿ ಎಳನೀರಿನ ಕೋಡಿ ಹರಿದು, ಕೃಷಿ ಭೂಮಿಯ ಒಂದಷ್ಟು ಜಾಗದ ತುಂಬ ಹರಿಯ ತೊಡಗಿತು. ಈ ಘಟನೆಯಿಂದ ಕಾಣಿಪಾಕಂ ಎಂಬ ಹೆಸರು ಬಂತು ಎಂದು ಪುರಾಣ ಕಥೆಗಳು ಹೇಳುತ್ತವೆ. ಕಾಣಿ ಎಂದರೆ ಎಕ್ಕರೆ, ಪಾಕ ಎಂದರೆ ಹರಿಯುವುದು ಎಂದರ್ಥ ಎಂದು ಹೇಳಲಾಗುತ್ತದೆ. ಸ್ವಯಂಭು ವಿನಾಯಕನ ಉದ್ಭವವಾದ ಮೇಲೆ ವಿಹಾರಿಪುರ ಕಾಣಿಪಾಕಂ ಎಂಬ ಹೆಸರು ಪಡೆಯಿತು.

ಘಟನೆ ನಡೆದಾಗ ವಿಗ್ರಹ ಎಲ್ಲಿ ಉದ್ಭವವಾಗಿತ್ತೋ ಇಂದಿಗೂ ಅದೇ ಜಾಗದಲ್ಲಿದೆ. ಬಾವಿಯ ಮೇಲ್ಭಾಗದಲ್ಲಿ ಗಣೇಶನ ಗರ್ಭಗುಡಿ ಇದೆ. ಮುಂಗಾರಿನ ವೇಳೆ ಉಕ್ಕಿ ಹರಿಯುವ ಇಲ್ಲಿನ ನೀರನ್ನು ಭಕ್ತಾದಿಗಳಿಗೆ ತೀರ್ಥದ ರೂಪದಲ್ಲಿ ವಿತರಿಸಲಾಗುತ್ತದೆ. ಈ ಬಾವಿಯ ನೀರು ಎಂದಿಗೂ ಬತ್ತದೆ ಇರುವುದು ಇಲ್ಲಿನ ಮತ್ತೊಂದು ವೈಶಿಷ್ಟ್ಯವಾಗಿದೆ.

ಉದ್ಭವವಾದ ದಿನದಿಂದಲೂ ಗಣೇಶನ ವಿಗ್ರಹ ಬೆಳೆಯುತ್ತಲೇ ಇದ್ದು, ವಿಗ್ರಹದ ಗಾತ್ರ ಹೆಚ್ಚುತ್ತಿದೆ ಎಂದು ಭಕ್ತರು ನಂಬಿದ್ದಾರೆ. 50 ವರ್ಷಗಳ ಹಿಂದೆ ಇಲ್ಲಿಗೆ ಭಕ್ತಾದಿಗಳು ಸಮರ್ಪಣೆ ಮಾಡಿದ್ದ ಬೆಳ್ಳಿಯ ಕವಚ, ಇಂದು ಆ ವಿಗ್ರಹಕ್ಕೆ ಹಿಡಿಸದೇ ಇರುವುದು ವಿಗ್ರಹ ಬೆಳೆಯುತ್ತಿರುವುದಕ್ಕೆ ಸಾಕ್ಷಿ ಎನ್ನುತ್ತಾರೆ ಸ್ಥಳೀಯರು.

ಸಾಮಾನ್ಯವಾಗಿ ವಿದ್ಯಾಪ್ರದಾಯಕನಾಗಿರುವ ಗಣೇಶ, ಕಾಣಿಪಾಕಂನಲ್ಲಿ ನ್ಯಾಯದಾನವನ್ನು ಸಹ ನೀಡುತ್ತಾನೆ. ಇಲ್ಲಿಗೆ ಬರುವ ಹಲವು ಮಂದಿ ಪುಣ್ಯ ಪ್ರದವಾದ ಬಾವಿಯಲ್ಲಿ ಮಿಂದೆದ್ದು, ಪರಸ್ಪರ ವಿವಾದಗಳನ್ನು ಬಗೆಹರಿಸಿಕೊಳ್ಳುವ ಸಂಪ್ರದಾಯ ನಡೆದುಬಂದಿದೆ.

ಐತೀಹ್ಯದಿಂದ ಮತ್ತು ಆಂತರಿಕ ವಿನ್ಯಾಸಗಳಿಂದ ಹೆಸರುವಾಸಿಯಾದ ಭಾರತದ ಅತ್ಯಂತ ಪ್ರಾಚೀನ ಗಣೇಶ ದೇವಾಲಯ ಇದಾಗಿದೆ. ಈ ದೇವಾಲಯದಲ್ಲಿನ ಗಣೇಶ ವಿಗ್ರಹದ ಹಣೆಯ ಮೇಲೆ ಬಿಳಿ, ಹಳದಿ ಮತ್ತು ಕೆಂಪು ಈ ಮೂರು ಬಣ್ಣಗಳನ್ನು ನೋಡಬಹುದು. ಈ ದೇವಾಲಯದಲ್ಲಿ ಬ್ರಹ್ಮೋತ್ಸವವನ್ನು ಹಾಗೂ ಗಣೇಶ ಚತುರ್ಥಿಯನ್ನು ಅದ್ದೂರಿಯಾಗಿ ಆಚರಿಸಲಾಗುತ್ತದೆ.

ABOUT THE AUTHOR

...view details