ಹೈದರಾಬಾದ್: ಪಶುವೈದ್ಯೆ ದಿಶಾ ಮೇಲಿನ ಅತ್ಯಾಚಾರ ಆರೋಪಿಗಳ ಎನ್ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸೈಬರಾಬಾದ್ ಪೊಲೀಸ್ ಆಯುಕ್ತ ವಿಶ್ವನಾಥ್ ಸಜ್ಜನರ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದರು.
ಆರೋಪಿಗಳನ್ನು ಇಂದು ಬೆಳಗ್ಗೆ 3.30ಕ್ಕೆ ಹೆಚ್ಚಿನ ತನಿಖೆ ಹಾಗೂ ಸ್ಥಳ ಮಹಜರು ಮಾಡಲು ಘಟನಾ ಸ್ಥಳಕ್ಕೆ ಪೊಲೀಸ್ ಭದ್ರತೆಯಲ್ಲಿ ಕರೆದುಕೊಂಡು ಬರಲಾಗಿತ್ತು. ಈ ವೇಳೆ ಆರೋಪಿಗಳು ಪಿಸ್ತೂಲ್ ಕಸಿದುಕೊಂಡು ನಮ್ಮ ಮೇಲೆ ಹಲ್ಲೆ ನಡೆಸಲು ಮುಂದಾದರು. ಈ ವೇಳೆ ಶರಣಾಗುವಂತೆ ನಮ್ಮ ಪೊಲೀಸರು ಕೇಳಿಕೊಂಡ್ರೂ ಅವರು ನಮ್ಮ ಮೇಲೆ ಗುಂಡಿನ ದಾಳಿ ನಡೆಸಿದ್ರು. ಹೀಗಾಗಿ ಆತ್ಮರಕ್ಷಣೆಗಾಗಿ ಆರೋಪಿಗಳ ಮೇಲೆ ಶೂಟೌಟ್ ಮಾಡಿದ್ದೇವೆ ಎಂದು ಸಜ್ಜನರ ಘಟನೆಯನ್ನು ವಿವರಿಸುತ್ತಾ ಹೋದರು.
ಘಟನೆ ವೇಳೆ ನಮ್ಮ ಇಬ್ಬರು ಪೊಲೀಸರಿಗೆ ಗಾಯಗಳಾಗಿದೆ. ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದರು.