ಹೈದರಾಬಾದ್ (ತೆಲಂಗಾಣ): ಲಾಕ್‌ಡೌನ್‌ನಿಂದಾಗಿ ರಾಜ್ಯದ ಆದಾಯವು ಇಳಿಕೆಯಾಗುವ ದೃಷ್ಟಿಯಿಂದ ರಾಜ್ಯ ಸರ್ಕಾರಿ ನೌಕರರ ಮೇ ತಿಂಗಳ ವೇತನದಲ್ಲಿಯೂ ಶೇಕಡಾ 50ರಷ್ಟು ಕಡಿತ ಮಾಡಲು ತೆಲಂಗಾಣ ಸರ್ಕಾರ ನಿರ್ಧರಿಸಿದೆ.
ಮೇ ತಿಂಗಳ ವೇತನದಲ್ಲೂ ಶೇಕಡಾ 50ರಷ್ಟು ಕಡಿತ: ಕೆಸಿಆರ್ ಖಡಕ್ ನಿರ್ಧಾರ - ತೆಲಂಗಾಣ ಸರ್ಕಾರ
ಸರ್ಕಾರಿ ನೌಕರರ ಮೇ ತಿಂಗಳ ವೇತನದಲ್ಲಿಯೂ ಶೇಕಡಾ 50ರಷ್ಟು ಕಡಿತ ಮಾಡಲು ತೆಲಂಗಾಣ ಸರ್ಕಾರ ನಿರ್ಧರಿಸಿದೆ. ಬಡ ಕುಟುಂಬಗಳಿಗೆ ನೆರವಾಗಲು 1,500 ರೂ. ಸಹಾಯಧನ ನೀಡುತ್ತಿದ್ದ ಯೋಜನೆಯನ್ನು ಕೂಡಾ ಸ್ಥಗಿತಗೊಳಿಸಲಾಗಿದೆ.
ಸಾರ್ವಜನಿಕ ಪ್ರತಿನಿಧಿಗಳ ವೇತನದಲ್ಲಿ ಶೇ. 75ರಷ್ಟು, ಅಖಿಲ ಭಾರತ ಸೇವಾ ಅಧಿಕಾರಿಗಳಲ್ಲಿ ಶೇ. 60ರಷ್ಟು, ರಾಜ್ಯ ಸರ್ಕಾರಿ ನೌಕರರಲ್ಲಿ ಶೇ. 50ರಷ್ಟು ವೇತನ ಕಡಿತ ಮಾಡಲಾಗುವುದು. ಹೊರಗುತ್ತಿಗೆ ಮತ್ತು ಗುತ್ತಿಗೆ ಕಾರ್ಮಿಕರಿಗೆ ಶೇ. 10ರಷ್ಟು ವೇತನ ಕಡಿತವಾಗಲಿದೆ. ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ನಡೆಸಿದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ನೆರವಾಗಲು 1,500 ರೂ. ಸಹಾಯಧನ ನೀಡುತ್ತಿದ್ದ ಯೋಜನೆಯನ್ನು ಕೂಡಾ ಸ್ಥಗಿತಗೊಳಿಸಲಾಗಿದೆ. ಇನ್ನು ಮುಂದೆ ಕಾರ್ಮಿಕರಿಗೆ ದೈನಂದಿನ ಕೆಲಸ ಸಿಗುವುದರಿಂದ, ಮೇ ತಿಂಗಳಿನಿಂದ ನಗದು ನೆರವು ನೀಡಲಾಗುವುದಿಲ್ಲ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ. ಆದರೆ ಮೇ ತಿಂಗಳಲ್ಲಿ 12 ಕೆ.ಜಿ ಉಚಿತ ಅಕ್ಕಿ ಪೂರೈಕೆ ಮುಂದುವರಿಯಲಿದೆ.