ಹೈದರಾಬಾದ್:ಕೇಂದ್ರ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ಹೊಸ ಕೃಷಿ ಮಸೂದೆಗಳಿಗೆ ಕೆಲವು ರಾಜ್ಯಗಳಲ್ಲಿ ವ್ಯಾಪಕ ಪ್ರತಿಭಟನೆ ವ್ಯಕ್ತವಾಗುತ್ತಿದೆ. ಇದರ ಮಧ್ಯೆ ತೆಲಂಗಾಣ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.
ಬೆಂಬಲ ಬೆಲೆಯಲ್ಲಿ ರೈತರಿಂದ ಭತ್ತ ಖರೀದಿಸಲು ತೆಲಂಗಾಣ ಸರ್ಕಾರ ಮುಂದಾಗಿದ್ದು, ಪ್ರತಿ ಕ್ವಿಂಟಲ್ ಭತ್ತಕ್ಕೆ 1,888 ರೂ ನೀಡಲು ಮುಂದಾಗಿದೆ. ರೈತರ ಗ್ರಾಮಗಳಿಗೆ ತೆರಳಿ ಸರ್ಕಾರಿ ಏಜೆನ್ಸಿಯವರು ಭತ್ತ ಖರೀದಿ ಮಾಡಲಿದ್ದಾರೆ ಎಂದು ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ತಿಳಿಸಿದ್ದಾರೆ.
ಸಚಿವರು ಹಾಗೂ ವಿವಿಧ ಅಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಇಷ್ಟು ದಿನ ರೈತರು ಮಾರುಕಟ್ಟೆಗೆ ಬಂದು ತಮ್ಮ ಭತ್ತ ಮಾರಾಟ ಮಾಡುತ್ತಿದ್ದರು. ಆದರೆ ಇದೀಗ ಅವರು ಇರುವ ಗ್ರಾಮಗಳಿಗೆ ತೆರಳಿ ಭತ್ತ ಖರೀದಿ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಶೇ.17ಕ್ಕಿಂತಲೂ ಕಡಿಮೆ ತೇವಾಂಶ ಇರುವ ಭತ್ತ ಖರೀದಿ ಮಾಡಲು ಕ್ರಮ ಕೈಗೊಂಡಿದ್ದು, A ಹಾಗೂ B ಗ್ರೇಡ್ಗಳಾಗಿ ಭತ್ತ ವಿಂಗಡನೆ ಮಾಡಲಾಗುವುದು. ಕಳೆದ ಕೆಲ ವರ್ಷಗಳಿಂದ ತೆಲಂಗಾಣ ಕೃಷಿಯಲ್ಲಿ ಹೆಚ್ಚು ಅಭಿವೃದ್ಧಿ ಹೊಂದುತ್ತಿದ್ದು, ಅದಕ್ಕೆ ಬೇಕಾಗಿರುವ ಎಲ್ಲ ಸೌಲಭ್ಯ ಒದಗಿಸಲು ನಾವು ಸಿದ್ಧರಿದ್ದೇವೆ ಎಂದು ಸಿಎಂ ತಿಳಿಸಿದ್ದಾರೆ. ಲಭ್ಯವಾಗಿರುವ ಮಾಹಿತಿ ಪ್ರಕಾರ, ತೆಲಂಗಾಣದಲ್ಲಿ 10.78 ಲಕ್ಷ ಎಕರೆ ಭತ್ತ ಬೆಳೆಯಲಾಗಿದೆ ಎಂದು ತಿಳಿದು ಬಂದಿದೆ.