ಹೈದರಾಬಾದ್(ತೆಲಂಗಾಣ): ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಸರ್ಕಾರ ತೆಲಂಗಾಣದಲ್ಲಿ ವಿಆರ್‌ಒ(ಗ್ರಾಮ ಕಂದಾಯ ಅಧಿಕಾರಿ) ವ್ಯವಸ್ಥೆಯನ್ನು ರದ್ದು ಮಾಡುವ ನಿರ್ಧಾರ ಕೈಗೊಂಡಿದೆ.
ಸರ್ಕಾರದ ಮುಖ್ಯ ಕಾರ್ಯದರ್ಶಿ ಸೋಮೇಶ್ ಕುಮಾರ್ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದು, ಇಂದು ಮಧ್ಯಾಹ್ನ 3 ಗಂಟೆಯೊಳಗೆ ಸಂಬಂಧಪಟ್ಟ ಇಲಾಖೆಗಳಿಂದ ದಾಖಲೆಗಳನ್ನು ಸಂಗ್ರಹಿಸಿ ಸಂಜೆ 5 ಗಂಟೆಯೊಳಗೆ ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಡಿಸಿಗಳಿಗೆ ಸೂಚಿಸಿದ್ದಾರೆ.
ಕಂದಾಯ ಇಲಾಖೆಯಲ್ಲಿನ ಭ್ರಷ್ಟಾಚಾರವನ್ನು ನಿಯಂತ್ರಿಸುವ ಸಲುವಾಗಿ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ. ಆದರೆ ಗ್ರಾಮ ಕಂದಾಯ ಅಧಿಕಾರಿಗಳು ಕೆಸಿಆರ್ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಮ್ಮ ಕರ್ತವ್ಯದ ಪ್ರಸ್ತುತ ಸ್ಥಾನದ ಬಗ್ಗೆ ಸ್ಪಷ್ಟತೆ ನೀಡಬೇಕು ಎಂದು ಕಂದಾಯ ನೌಕರರ ಸಂಘದ ಸದಸ್ಯರು ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಕಳೊಂದು ವರ್ಷದಿಂದಲೂ ಕೆಸಿಆರ್ ಸರ್ಕಾರ ವಿಆರ್‌ಒ ವ್ಯವಸ್ಥೆಯನ್ನು ರದ್ದು ಮಾಡಿ ಹೊಸ ಕಂದಾಯ ವ್ಯವಸ್ಥೆಯನ್ನು ಜಾರಿಗೆ ತರುವ ಬಗ್ಗೆ ಚಿಂತನೆ ನಡೆಸುತ್ತಾ ಬಂದಿತ್ತು. ಕಳೆದ ವರ್ಷದ ಮಳೆಗಾಲದ ಅಧಿವೇಶನದಲ್ಲಿ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಇದರ ಬಗ್ಗೆ ಪ್ರಸ್ತಾಪವನ್ನು ಮಾಡಿದ್ದರು. ಒಂದು ವೇಳೆ ನೌಕರರು ಪ್ರತಿಭಟನೆಗೆ ಮುಂದಾದರೆ ಅವರಿಗೇ ನಷ್ಟ ಎಂಬ ಮಾತನ್ನು ಸಿಎಂ ಹೇಳಿದ್ದಾರೆ.