ಹೈದರಾಬಾದ್: ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ನಡೆಸಿರುವ ಬೃಹತ್ ಕಾರ್ಯಾಚರಣೆಯಲ್ಲಿ ಸಹಾಯಕ ಪೊಲೀಸ್ ಆಯುಕ್ತ ಬಲೆಗೆ ಬಿದ್ದಿದ್ದು, ಅವರ ಮನೆಯಲ್ಲಿ ಶೋಧ ನಡೆಸಿದಾಗ ಬರೋಬ್ಬರಿ 70 ಕೋಟಿ ರೂ. ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ.
ಪೊಲೀಸ್ ಅಧಿಕಾರಿ ಅನಂತಪುರದಲ್ಲಿ 55 ಎಕರೆ ಕೃಷಿ ಭೂಮಿ, ಹೈದರಾಬಾದ್ನ ಮಾಧಾಪುರ ಸೈಬರ್ ಟವರ್ಸ್ ಬಳಿ 1,960 ಚದರ ಅಡಿಯ ನಾಲ್ಕು ಪ್ಲಾಟ್, ಎರಡು ಮನೆ ಹಾಗೂ ನಾಲ್ಕು ಅಂತಸ್ತಿನ ವಾಣಿಜ್ಯ ಸಂಕೀರ್ಣ ಹೊಂದಿದ್ದಾಗಿ ತಿಳಿದು ಬಂದಿದೆ.
ಸದ್ಯ ರಾಚಕೊಂಡ ಪೊಲೀಸ್ ಕಮಿಷನರೇಟ್ ಮಲ್ಕಾಜ್ಗಿರಿಯಲ್ಲಿ ನರಸಿಂಹ ರೆಡ್ಡಿ ಎಸಿಪಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರ ಬಂಧನ ಮಾಡಿರುವ ಎಸಿಬಿ ಅಧಿಕಾರಿಗಳು ನಾಂಪಲ್ಲಿ ಕ್ರಿಮಿನಲ್ ಕೋರ್ಟ್ಗೆ ಹಾಜರುಪಡಿಸಿದ್ದಾರೆ. ನಿನ್ನೆ ವರಂಗಲ್, ಜಂಗಾಂವ್, ನಲ್ಗೊಂಡ, ಕರೀಂನಗರ ಜಿಲ್ಲೆ ಸೇರಿ ಸುಮಾರು 25 ಸ್ಥಳಗಳಲ್ಲಿ ಏಕಕಾಲದಲ್ಲಿ ಶೋಧ ನಡೆಸಲಾಗಿದೆ.
ಶೋಧ ಕಾರ್ಯದ ವೇಳೆ 15 ಲಕ್ಷ ರೂ ನಗದು, ಎರಡು ಬ್ಯಾಂಕ್ ಲಾಕರ್ ಮತ್ತು ರಿಯಲ್ ಎಸ್ಟೇಟ್ನ ಪ್ರಮುಖ ದಾಖಲೆ ಸಿಕ್ಕಿವೆ. ಸಿಕ್ಕಿರುವ ಆಸ್ತಿಗಳ ಪ್ರಸ್ತುತ ಮಾರುಕಟ್ಟೆ ಮೌಲ್ಯ ಬರೋಬ್ಬರಿ 70 ಕೋಟಿ ರೂ ಎಂದು ತಿಳಿದು ಬಂದಿದೆ. 1991ರಲ್ಲಿ ಪೊಲೀಸ್ ಇಲಾಖೆ ಸೇರಿದ್ದ ನರಸಿಂಹ ರೆಡ್ಡಿ ಉಪ್ಪಲ್ನಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಆಗಿ ಕೆಲಸ ಮಾಡಿದ್ದರು.