ನವದೆಹಲಿ:ದೇಶದಲ್ಲಿ ಲಾಕ್ಡೌನ್ 3.0 ಜಾರಿಯಲ್ಲಿದ್ದು, ಇದರ ಮಧ್ಯೆ ನಾಳೆಯಿಂದ ಆಯ್ದ ನಗರಗಳಿಗೆ 15 ವಿಶೇಷ ಪ್ಯಾಸೆಂಜರ್ ರೈಲು ಓಡಾಟ ನಡೆಸಲಿವೆ. ಇದೇ ವಿಷಯವಾಗಿ ಪ್ರಧಾನಿ ಮೋದಿ ಸರ್ಕಾರದ ವಿರುದ್ಧ ತೆಲಂಗಾಣ ಸಿಎಂ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎಲ್ಲ ರಾಜ್ಯದ ಮುಖ್ಯಮಂತ್ರಿಗಳೊಂದಿಗೆ ನಡೆದ ವಿಡಿಯೋ ಸಂವಾದದಲ್ಲಿ ಭಾಗಿಯಾಗಿ ತೆಲಂಗಾಣ ಮುಖ್ಯಮಂತ್ರಿ ಕೆ.ಸಿ ಚಂದ್ರಶೇಖರ್ ರಾವ್, ದೇಶದಲ್ಲಿ ರೈಲು ಸಂಚಾರ ಪುನಾರಂಭ ಮಾಡುವುದರಿಂದ ಕೊರೊನಾ ವೈರಸ್ ಮತ್ತಷ್ಟು ಹರಡುವ ಸಾಧ್ಯತೆ ದಟ್ಟವಾಗಿರುತ್ತದೆ. ಹಾಗೂ ಎಲ್ಲರಿಗೂ ಸ್ಕ್ರೀನಿಂಗ್ ಮಾಡುವುದು ಕಷ್ಟ. ಕಂಟೇನ್ಮೆಂಟ್ ಝೋನ್ಗಳಲ್ಲಿ ಲಾಕ್ಡೌನ್ ಮುಂದುವರಿಕೆ ಮಾಡುವುದು ಒಳ್ಳೆಯದು ಎಂದು ಅವರು ತಿಳಿಸಿದ್ದಾರೆ.
ತೆಲಂಗಾಣ ಕೊರೊನಾ ವಿರುದ್ಧ ಹೋರಾಟ ನಡೆಸಲು ಸಂಪೂರ್ಣವಾಗಿ ಸಿದ್ಧವಾಗಿದ್ದು, ಯಾವುದೇ ಕಾರಣಕ್ಕೂ ಕೇಂದ್ರ ರೈಲು ಸಂಚಾರಕ್ಕೆ ಅವಕಾಶ ಮಾಡಿಕೊಡಬಾರದು. ಈಗಾಗಲೇ ರೈಲು ಸಂಚಾರಕ್ಕಾಗಿ ತೆಗೆದುಕೊಂಡಿರುವ ನಿರ್ಧಾರ ತಡೆ ಹಿಡಿಯಬೇಕು ಎಂದಿದ್ದಾರೆ.
ಇದೇ ವೇಳೇ ಮಾತನಾಡಿರುವ ಗುಜರಾತ್ ಸಿಎಂ, ಲಾಕ್ಡೌನ್ ಕೇವಲ ಕಂಟೇನ್ಮೆಂಟ್ ಝೋನ್ಗಳಿಗೆ ಮಾತ್ರ ಸೀಮಿತಗೊಳ್ಳಬೇಕು. ಕೆಲವೊಂದು ಸುರಕ್ಷತೆಗಳೊಂದಿಗೆ ಆರ್ಥಿಕ ಚಟುವಟಿಕೆ ಆರಂಭ ಮಾಡಬೇಕಾಗಿದ್ದು, ಶಾಲಾ-ಕಾಲೇಜು ಬೇಸಿಗೆ ರಜೆ ನಂತರ ಆರಂಭವಾಗಲಿ. ಇದರ ಜತೆಗೆ ನಿಧಾನವಾಗಿ ಸಾರ್ವಜನಿಕ ಸೇವೆ ಆರಂಭಿಸಬೇಕು ಎಂದು ಅವರು ತಿಳಿಸಿದ್ದಾರೆ.