ಹೈದರಾಬಾದ್: ಗುರುವಾರ ಖಾಸಗಿ ಕಾರ್ಯಕ್ರಮ ಮುಗಿಸಿ ಹಿಂದಿರುಗುತ್ತಿದ್ದಾಗ ಟೋಲಿ ಚೌಕಿಯ ರಸ್ತೆಬದಿ ನಿಂತಿದ್ದ ವಿಶೇಷ ಚೇತನ ವ್ಯಕ್ತಿಯನ್ನು ಕಂಡ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ತಮ್ಮ ಕಾರು ನಿಲ್ಲಿಸಿ ಆತನ ಕಷ್ಟ ಆಲಿಸಿದ್ದಾರೆ.
ತಾನೊಬ್ಬ ಕಾರು ಚಾಲಕ ಎಂದು ಸಿಎಂ ಬಳಿ ಮಾತನಾಡಿದ ವಿಶೇಷ ಚೇತನ ವ್ಯಕ್ತಿ ಮೊಹಮ್ಮದ್ ಸಲೀಂ, ಕಳೆದ 9 ವರ್ಷಗಳಿಂದ ವಿವಿಧ ಕಾಯಿಲೆಯಿಂದ ಬಳಲುತ್ತಿದ್ದು, 4 ವರ್ಷದ ಹಿಂದೆ ಕಟ್ಟಡದಿಂದ ಬಿದ್ದು ಕಾಲು ಮುರಿದುಕೊಂಡಿರೋದಾಗಿ ಅಳಲು ತೋಡಿಕೊಂಡಿದ್ದಾರೆ.
ತಮ್ಮ ಮಗನೂ ಸಹ ಅನಾರೋಗ್ಯದಿಂದ ಬಳಲುತ್ತಿದ್ದಾನೆ. ನಮಗೆ ಸ್ವಂತ ಸೂರು ಇಲ್ಲ, ಸಹಾಯದ ಅಗತ್ಯವಿದೆ ಎಂದು ಚಂದ್ರಶೇಖರ್ ರಾವ್ ಬಳಿ ತಮ್ಮ ನೋವು ತೋಡಿಕೊಂಡಿದ್ದಾರೆ.
ವಿಶೇಷ ಚೇತನ ವ್ಯಕ್ತಿಯ ಕಷ್ಟಕ್ಕೆ ಸ್ಪಂದಿಸಿದ ರಾವ್, ಅಂಗವಿಕಲ ಪಿಂಚಣಿಯನ್ನು ಬಿಡುಗಡೆ ಮಾಡಿ, ಎರಡು ಬೆಡ್ ರೂಮ್ ಮನೆ ನೀಡುವಂತೆ ಹೈದರಾಬಾದ್ ಜಿಲ್ಲಾಧಿಕಾರಿ ಶ್ವೇತಾ ಮೊಹಂತಿಗೆ ಸೂಚನೆ ನೀಡಿದ್ದಾರೆ.
ತಕ್ಷಣ ಸಲೀಂ ಮನೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಶ್ವೇತಾ ಮೊಹಂತಿ ಅಂಗವಿಕಲರ ಪ್ರಮಾಣ ಪತ್ರ ಹೊಂದಿದ್ದ ಸಲೀಂಗ್ಗೆ ಸ್ಥಳದಲ್ಲೇ ಪಿಂಚಣಿ ಮಂಜೂರು ಮಾಡಿದ್ರು. ಅಲ್ಲದೇ ಸಲೀಂ ಅವರಿಗೆ ಜಿಯಾಗುಡಾದಲ್ಲಿ 2 ಬೆಡ್ ರೂಂ ಹೊಂದಿರುವ ಮನೆ ನೀಡಲಾಯಿತು. ಸಲೀಂ ಅವರ ಚಿಕಿತ್ಸೆಗಾಗಿ ಸರ್ಕಾರವು ವೈದ್ಯಕೀಯ ವೆಚ್ಚವನ್ನು ಭರಿಸಲಿದೆ ಮತ್ತು ಅವರ ಮಗನಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಹಣಕಾಸಿನ ನೆರವು ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ.