ಜೈಪುರ: ಬಾಲಕಿ ಮೇಲೆ ನಡೆದ ಅತ್ಯಾಚಾರ ಘಟನೆಯಿಂದ ಜೈಪುರ ಉದ್ವಿಗ್ನಗೊಂಡಿರುವ ಸನ್ನಿವೇಶದಲ್ಲಿಯೇ ಲೈಂಗಿಕ ದೌರ್ಜನ್ಯಕ್ಕೊಳಗಾಗುತ್ತಿದ್ದ ಅಪ್ರಾಪ್ತೆಯನ್ನು ನಾಲ್ವರು ತರುಣರು ರಕ್ಷಿಸಿದ ಘಟನೆ ನಡೆದಿದೆ.
ಬಾಲಕಿಯನ್ನು ಸಂಕಷ್ಟದಿಂದ ರಕ್ಷಿಸಿದ ಮನೀಶ್ (15), ಅಮಿತ್ (18), ರೋಹಿತ್ (18) ಹಾಗೂ ಬಾದಲ್ (14) ಎಂಬ ತರುಣರಿಗೆ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಬಿ.ಕೆ. ಸೋನಿ ಅವರು ಅಭಿನಂದನಾ ಪತ್ರ ಹಾಗೂ ನಗದು ಬಹುಮಾನ ನೀಡಿ ಗೌರವಿಸಿದರು.
ಕಳೆದ ಗುರುವಾರ ಈ ತರುಣರು ಕ್ರಿಕೆಟ್ ಆಡುತ್ತಿದ್ದ ವೇಳೆ ಬಾಲಕಿಯೊಬ್ಬಳು ಕಿರುಚಾಡಿದ ಶಬ್ದ ಕೇಳಿಸಿತ್ತು. ಕೂಗಾಟ ಕೇಳಿಬರುತ್ತಿದ್ದ ದಿಕ್ಕಿನತ್ತ ಸಾಗಿದಾಗ ಗುಡ್ಡದ ಹಿಂದೆ ವ್ಯಕ್ತಿಯೊಬ್ಬ ಬಾಲಕಿ ಮೇಲೆ ಅತ್ಯಾಚಾರ ಎಸಗಲು ಯತ್ನಿಸುತ್ತಿದ್ದ. ನಾಲ್ವರು ತರುಣರು ತಮ್ಮೆಲ್ಲ ಶಕ್ತಿ ಬಳಿಸಿ, ಆರೋಪಿಯನ್ನು ಹಿಡಿದು, ಪೊಲೀಸರಿಗೆ ಒಪ್ಪಿಸಿದ್ದರು.
ಸಂಕಷ್ಟ ಸಮಯದಲ್ಲಿ ಪರಾಕ್ರಮ ತೋರಿ, ಬಾಲಕಿಯನ್ನು ರಕ್ಷಿಸಿದ ಈ ತರುಣರನ್ನು ಗುಣಗಾನ ಮಾಡಿದ ಸೋನಿ ಅವರು, ಇವರು ನಿಜವಾದ ನಾಗರಿಕರ ಕರ್ತವ್ಯ ನಿರ್ವಹಿಸಿದ್ದಾರೆ. ಅವರ ಭವಿಷ್ಯ ಉತ್ತಮವಾಗಿರಲೆಂದು ಹಾರೈಸಿದರು.
ಮತ್ತೊಂದೆಡೆ ಸೋಮವಾರ ಬಾಲಕಿ ಮೇಲೆ ನಡೆದ ಅತ್ಯಾಚಾರ ಪ್ರಕರಣವನ್ನು ಖಂಡಿಸಿ, ಉದ್ರಿಕ್ತರು ಪ್ರತಿಭಟನೆ ನಡೆಸಿದರು. ಮನೆ ಹಾಗೂ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಹಲವು ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದ್ದು, ಹಲವೆಡೆ ಅಂತರ್ಜಾಲ ಸಂಪರ್ಕವನ್ನೂ ಕಡಿತ ಮಾಡಲಾಗಿದೆ.