ದುಬೈ:ಕಳೆದ ಎರಡು ವಾರಗಳ ಹಿಂದೆ ಉತ್ತರ ಪ್ರದೇಶದ ಹತ್ರಾಸ್ನಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದ ಯುವತಿ ಇಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದು, ಇದಕ್ಕೆ ಎಲ್ಲೆಡೆಯಿಂದ ತೀವ್ರ ಆಕ್ರೋಶ ವ್ಯಕ್ತವಾಗ್ತಿದೆ.
ಸೆಪ್ಟೆಂಬರ್ 14ರಂದು ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದ ಯುವತಿಯನ್ನ ಹೆಚ್ಚಿನ ಚಿಕಿತ್ಸೆಗೋಸ್ಕರ ದೆಹಲಿಯ ಸಫ್ತಜಂಗ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದು, ಇದೇ ವಿಚಾರವಾಗಿ ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಟ್ವೀಟ್ ಮಾಡಿದ್ದಾರೆ.
ಕೆಳಜಾತಿ ಹುಡುಗಿಯ ಮೇಲೆ ಮೇಲ್ಜಾತಿಯ ನಾಲ್ವರು ಕಾಮುಕರ ಅತ್ಯಾಚಾರ: ಯುವತಿ ಸ್ಥಿತಿ ಗಂಭೀರ
ಹತ್ರಾಸ್ನಲ್ಲಿ ನಡೆದಿದ್ದು ಅಮಾನವೀಯ ಮತ್ತು ಕ್ರೌರ್ಯ ಮೀರಿದೆ. ಈ ಘೋರ ಅಪರಾಧದಲ್ಲಿ ಭಾಗಿಯಾಗಿರುವ ಅಪರಾಧಿಗಳಿಗೆ ಕಠಿಣ ಶಿಕ್ಷೆ ಆಗಲಿದೆ ಎಂದು ಭಾವಿಸುತ್ತೇನೆ ಎಂದು ಕೊಹ್ಲಿ ಟ್ವೀಟ್ ಮಾಡಿದ್ದಾರೆ.
ಪಶ್ಚಿಮ ಉತ್ತರ ಪ್ರದೇಶದ ಹತ್ರಾಸ್ನಲ್ಲಿ 20 ವರ್ಷದ ಯುವತಿ ತನ್ನ ಸಹೋದರ ಹಾಗೂ ತಾಯಿ ಜತೆ ಹೊಲಕ್ಕೆ ಹೋಗಿದ್ದಳು. ಮೇವು ತೆಗೆದುಕೊಂಡು ವಾಪಸ್ ಬರುತ್ತಿದ್ದ ವೇಳೆ ಆಕೆಯ ಮೇಲೆ ನಾಲ್ವರು ಕಾಮುಕರು ಅತ್ಯಾಚಾರವೆಸಗಿದ್ದರು. ಇದಾದ ಬಳಿಕ ಆಕೆಯ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿದ್ದ ಕಾಮುಕರು ನಾಲಿಗೆ ಕತ್ತರಿಸಿ ಪರಾರಿಯಾಗಿದ್ದರು.
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ಅಕ್ಷಯ್ ಕುಮಾರ್ ಸೇರಿದಂತೆ ಅನೇಕರು ಸಂತಾಪ ಸೂಚಿಸಿ, ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡುವಂತೆ ಮನವಿ ಮಾಡಿದ್ದಾರೆ.