ಚೆನ್ನೈ:ಲಾಕ್ಡೌನ್ ಇದ್ದರೂ ಸುಮ್ಮನೆ ಬೀದಿ ಸುತ್ತುವವರ ಮೇಲೆ ಕಣ್ಣಿಡುವುದು ಪೊಲೀಸರಿಗೆ ಸವಾಲಾಗಿ ಪರಿಣಮಿಸಿದೆ. ಅದರಲ್ಲೂ ಬೃಹತ್ ಮಹಾನಗರಗಳಲ್ಲಿ ಎಲ್ಲ ಪ್ರದೇಶಗಳಲ್ಲೂ ಪೊಲೀಸ್ ಕಾವಲು ಹಾಕುವುದು ಕಷ್ಟವೇ ಸರಿ. ಹೀಗಾಗಿ ತಮಿಳುನಾಡು ಪೊಲೀಸರು ಲಾಕ್ಡೌನ್ ಮಧ್ಯೆ ಸುತ್ತಾಡುವವರ ಮೇಲೆ ಕಣ್ಣಿಡಲು ಡ್ರೋನ್ ಬಳಸಲು ಮುಂದಾಗಿದ್ದಾರೆ. ಚೆನ್ನೈ, ಕನ್ಯಾಕುಮಾರಿ ಹಾಗೂ ಈರೋಡ್ ಜಿಲ್ಲೆಗಳಲ್ಲಿನ ಪೊಲೀಸರು ಡ್ರೋನ್ ಕ್ಯಾಮೆರಾ ಮೂಲಕ ಎಲ್ಲೆಡೆ ಹದ್ದಿನ ಕಣ್ಣಿಡಲಿದ್ದಾರೆ.
ನಗರಗಳ ಪ್ರಮುಖ ಬೀದಿಗಳು, ಸ್ಥಳಗಳು ಹಾಗೂ ಅಂತಾರಾಜ್ಯ ಚೆಕ್ಪೋಸ್ಟ್ ಇರುವ ಸ್ಥಳಗಳ ಮೇಲೆ ಇನ್ನು ಡ್ರೋನ್ ಹಾರಾಡಲಿವೆ. ಅದರಲ್ಲೂ ತಮಿಳುನಾಡಿಗೆ ಹೊಂದಿಕೊಂಡಿರುವ ಕರ್ನಾಟಕ, ಕೇರಳ ಹಾಗೂ ಆಂಧ್ರ ಪ್ರದೇಶಗಳ ಗಡಿ ರೇಖೆಯಲ್ಲಿ ಡ್ರೋನ್ ಹೆಚ್ಚಾಗಿ ಕೆಲಸ ಮಾಡಲಿವೆ. ಈ ಮೂಲಕ ತಮಿಳುನಾಡಿನಿಂದ ಹೊರ ಹೋಗುವವರು ಹಾಗೂ ಬೇರೆ ರಾಜ್ಯಗಳಿಂದ ಒಳ ನುಸುಳುವವರ ಮೇಲೆ ನಿಗಾ ಇಡಲು ಸಾಧ್ಯವಾಗಲಿದೆ ಎಂದು ತಮಿಳುನಾಡು ಪೊಲೀಸರು ಹೇಳಿದ್ದಾರೆ.