ತಮಿಳುನಾಡು:ಭಾರತದ ಮಾಜಿ ನಾಯಕ ಎಂ.ಎಸ್. ಧೋನಿ ಆಗಸ್ಟ್ 15 ರಂದು ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸುತ್ತಿದ್ದಂತೆ, ಧೋನಿ ನಿವೃತ್ತಿಯ ಬಗ್ಗೆ ಕೋಟ್ಯಾಂತರ ಜನರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮತಮ್ಮ ಪ್ರತಿಕ್ರಿಯೆಗಳನ್ನು ಹಂಚಿಕೊಂಡರು.
ಆದ್ರೆ ಇವೆಲ್ಲದರ ಮಧ್ಯೆ ಈ ಒಬ್ಬ ಧೋನಿ ಅಭಿಮಾನಿ ವಿಶೇಷವಾಗಿ ಕಂಡುಬಂದಿದ್ದಾನೆ. ತಮಿಳುನಾಡಿನ ಈರೋಡು ಜಿಲ್ಲೆಯ ಕೈಮಗ್ಗ ಕಾರ್ಮಿಕರೊಬ್ಬರು ಧೋನಿಯ ಚಿತ್ರ ಬಿಡಿಸಿದ ಕಂಬಳಿಯೊಂದನ್ನು ವಿನ್ಯಾಸಗೊಳಿಸಿದ್ದಾರೆ.
ಕಂಬಳಿ ಮೇಲೆ ತಯಾರಾದ ತಾಲಾ ಚಿತ್ರ ಸಿಂಟೆಕ್ಸ್ ಕೋ-ಆಪರೇಟಿವ್‌ನ ಕೈಮಗ್ಗ ಕೆಲಸಗಾರ ಅಪ್ಪುಸಾಮಿ, ಧೋನಿಯ ಪಕ್ಕಾ ಅಭಿಮಾನಿ. ಈ ಹಿಂದೆನೂ ಇವರು ಸೆಲೆಬ್ರಿಟಿಗಳ ಚಿತ್ರಗಳಿರುವ ಕಂಬಳಿಗಳನ್ನು ವಿನ್ಯಾಸಗೊಳಿಸುತ್ತಿದ್ದರು. ಆದ್ರೆ ಈ ಬಾರಿ ಅವರು ವಿನ್ಯಾಸಗೊಳಿಸಿರುವ ಕಂಬಳಿ ಮೇಲೆ ಧೋನಿಯ ಚಿತ್ರವನ್ನು ಬಿಡಿಸಿದ್ದಾರೆ. ಅದರ ಮೇಲೆ ತಲಾ ಎಂಬ ಕುಸುರಿಯನ್ನೂ ಬರೆದಿದ್ದಾರೆ.
ತಲಾ ಎಂದರೆ ತಮಿಳು ಭಾಷೆಯಲ್ಲಿ ನಾಯಕ ಎಂದರ್ಥ. ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳು ಧೋನಿಯನ್ನು ಹಾಗೆಯೇ ಕರೆಯುತ್ತಾರೆ.
"ಮಗಳು ಝಿವಾಳೊಂದಿಗೆ ಆಡುತ್ತಿರುವ ತಲಾ ಅವರ ಚಿತ್ರವನ್ನು ಕಂಬಳಿಯಲ್ಲಿ ಕುಸುರಿ ಮಾಡಲಾಗಿದೆ. ಈ ವಿನ್ಯಾಸದ ಮೂಲಕ ನಾನು ಭಾರತದ ಮಾಜಿ ನಾಯಕನಿಗೆ ಗೌರವ ಸಲ್ಲಿಸುತ್ತಿದ್ದೇನೆ. ಈ ಕಂಬಳಿ ವಿನ್ಯಾಸಗೊಳಿಸಲು ನಾನು 15 ದಿನಗಳನ್ನು ತೆಗೆದುಕೊಂಡಿದ್ದೇನೆ ಹಾಗೂ ಈ ಕಂಬಳಿಯನ್ನು ಧೋನಿಗೆ ನೀಡಲು ನಾನು ಬಯಸುತ್ತೇನೆ" ಎಂದು ಹೇಳುತ್ತಾರೆ ಅಪ್ಪುಸಾಮಿ.
"ಜರ್ಸಿ ನಂಬರ್ 7 ಕೇವಲ ಒಂದು ಸಂಖ್ಯೆಯಾಗಿರಲಿಲ್ಲ. ಅದು ದೇಶವು ನೆನಪಿಸಿಕೊಳ್ಳುವ ಭಾವನೆಯಾಗಿದೆ. ಮೂರು ಪ್ರಮುಖ ಐಸಿಸಿ ಟ್ರೋಫಿಗಳನ್ನು ತಂದುಕೊಟ್ಟ ಏಕೈಕ ನಾಯಕ ಆತ. ಅವನ ಚಾಣಾಕ್ಷ ನಾಯಕತ್ವ, ಭವ್ಯವಾದ ವಿಕೆಟ್ ಕೀಪಿಂಗ್ ಕೌಶಲ್ಯ ಸದಾ ಶಾಶ್ವತವಾಗಿ ನೆನಪಿನಲ್ಲಿ ಉಳಿಯಲಿವೆ ಎಂದು ಅವರು ಹೇಳಿದರು.
ಸದ್ಯ ಎಂಎಸ್ ಧೋನಿ ಯುಎಇಯಲ್ಲಿ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ 13 ನೇ ಆವೃತ್ತಿಯಲ್ಲಿ ಆಡಲು ಸಜ್ಜಾಗುತ್ತಿದ್ದಾರೆ.