ಚೆನ್ನೈ: ಕಾಂಗ್ರೆಸ್ ಚುನಾವಣಾ ಸಭೆಯಲ್ಲಿ ಖುರ್ಚಿಗಳು ಖಾಲಿ ಖಾಲಿ ಇರುವ ಫೋಟೋ ತೆಗೆಯುತ್ತಿದ್ದ ಛಾಯಾಚಿತ್ರ ಪತ್ರಕರ್ತನ ಮೇಲೆ ಕೈ ಕಾರ್ಯಕರ್ತರು ಹಿಗ್ಗಾಮುಗ್ಗ ಥಳಿಸಿರುವ ಘಟನೆ ಚೆನ್ನೈನಲ್ಲಿ ನಡೆದಿದೆ.
ತಮಿಳು ವಾರಪತ್ರಿಕೆಯೊಂದರ ಫೋಟೋ ಜರ್ನಲಿಸ್ಟ್ ಆರ್.ಎಂ. ಮುತ್ತುರಾಜ್ ಎಂಬ ಎಂಬುವರನ್ನು ಹಿಡಿದು ಕಾಂಗ್ರೆಸ್ ಕಾರ್ಯಕರ್ತರು ಎಳೆದಾಡಿದ್ದಾರೆ. ಹಾಗೇನೇ ಮನಬಂದಂತೆ ಹಲ್ಲೆ ನಡೆಸಿದ್ದಾರೆ. ಈ ದೃಶ್ಯಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.
ಫೋಟೋ ಜರ್ನಲಿಸ್ಟ್ ಮೇಲೆ ಕೈ ಕಾರ್ಯಕರ್ತರ ಹಲ್ಲೆ
ತಮಿಳುನಾಡಿನ ವಿರುಧು ನಗರದಲ್ಲಿ ಕಾಂಗ್ರೆಸ್ ನಾಯಕ ಕೆ.ಎಸ್.ಅಳಗಿರಿ ಭಾಗವಹಿಸಿದ್ದ ಸಭೆಯಲ್ಲಿ ಬಹುಪಾಲು ಚೇರ್ಗಳು ಖಾಲಿಯಾಗಿದ್ದವು. ಈ ದೃಶ್ಯವನ್ನು ಮುತ್ತು ರಾಜ್ ಸೆರೆಹಿಡಿಯುತ್ತಿದ್ದರು. ಈ ವೇಳೆ ಏಕಾಏಕಿ ಪತ್ರಕರ್ತನ ಮೇಲೆರಗಿದ ಕಾಂಗ್ರೆಸ್ ಕಾರ್ಯಕರ್ತರು ಮೊದಲು ಕ್ಯಾಮೆರಾ ಕಿತ್ತುಕೊಂಡು, ಹಲ್ಲೆ ನಡೆಸುತ್ತಿರುವ ದೃಶ್ಯಾವಳಿಗಳು ವಿಡಿಯೋದಲ್ಲಿದೆ. ತಕ್ಷಣ ಅಲ್ಲಿಯೇ ಇದ್ದ ಇತರ ಪತ್ರಕರ್ತರು ನೆರವಿಗೆ ಧಾವಿಸಿ ಮುತ್ತುರಾಜ್ರನ್ನು ಅಪಾಯದಿಂದ ಕಾಪಾಡಿದರು. ಘಟನೆಯಲ್ಲಿ ಗಾಯಗೊಂಡ ಮುತ್ತುರಾಜ್ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಾಗದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಸಂಬಂಧ ಪೊಲೀಸರಿಗೆ ದೂರು ನೀಡಲಾಗಿದ್ದು,ವಿಚಾರಣೆ ನಡೆಯುತ್ತಿದೆ.
ಈ ಘಟನೆಯನ್ನು ಬಿಜೆಪಿಯ ಎಸ್ಜಿ ಸೂರ್ಯ ಖಂಡಿಸಿದ್ದು, ಕಾಂಗ್ರೆಸ್ ಕಾರ್ಯಕರ್ತರನ್ನು ಗೂಂಡಾಗಳು ಎಂದು ಕರೆದಿದ್ದಾರೆ.