ನವದೆಹಲಿ:ತ್ರಿಪುರಾಕ್ಕೆ ರಮೇಶ್ ಬೈಸಿ, ಛತ್ತೀಸ್ಘಡ್ಗೆ ಅನುಸೂಯಾ ಉಯಿಕೆ, ಮಧ್ಯಪ್ರದೇಶಕ್ಕೆ ಲಾಲ್ ಜಿ ಟಂಡನ್, ಬಿಹಾರಕ್ಕೆ ಫಾಗು ಚೌಹ್ಹಾಣ್ ಮತ್ತು ಉತ್ತರ ಪ್ರದೇಶಕ್ಕೆ ಆನಂದಿಬೆನ್ ಪಟೇಲ್ ನೂತನ ರಾಜ್ಯಪಾಲರಾಗಿ ಇಂದು ಪ್ರಮಾಣ ವಚನ ಸ್ವೀಕರಿಸಿದರು.
ಛತ್ತೀಸ್ಘಡದ ರಾಯ್ಪುರ ಲೋಕಸಭಾ ಕ್ಷೇತ್ರದಿಂದ ಏಳು ಬಾರಿ ಸಂಸದರಾಗಿದ್ದ ಹಾಗೂ ಮಾಜಿ ಸಚಿವ ರಮೇಶ್ ಬೈಸಿ ಅವರು ತ್ರಿಪುರಾದ 18ನೇ ರಾಜ್ಯಪಾಲರಾಗಿ ಅಧಿಕಾರ ವಹಿಸಿಕೊಂಡರು. ಬೈಸ್ ಅವರಿಗೆ ಇದೀಗ 71 ವರ್ಷ.
ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಸಂಜಯ್ ಕರೋಲ್ ಅವರು ನೂತನ ರಾಜ್ಯಪಾಲರಿಗೆ ರಾಜಭವನದಲ್ಲಿ ಪ್ರತಿಜ್ಞಾ ವಿಧಿ ಬೋಧಿಸಿದರು. ಈ ವೇಳೆ ತ್ರಿಪುರಾ ಸಿಎಂ ಬಿಪ್ಲಬ್ ಕುಮಾರ್ ಉಪಸ್ಥಿತರಿದ್ದರು.
ಛತ್ತೀಸ್ಘಡ್ನ ನೂತನ ಗವರ್ನರ್ ಆಗಿನೇಮಕಗೊಂಡ ಅನುಸೂಯಾ ಉಯಿಕೆ ರಾಜಭವನದ ದರ್ಬಾರ್ ಹಾಲ್‌ನಲ್ಲಿ ನಡೆದ ಸಮಾರಂಭದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ಅನಸೂಯಾ ಅವರನ್ನು ಜುಲೈ 16ರಂದು ಛತ್ತೀಸ್ಘಡದ ರಾಜ್ಯಪಾಲರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಲಾಗಿತ್ತು. ಇದಕ್ಕೂ ಮೊದಲು ಆನಂದಿ ಬೆನ್ ಅವರು ರಾಜ್ಯಪಾಲರಾಗಿದ್ದರು. ಮಧ್ಯಪ್ರದೇಶದ ಶಾಸಕರಾಗಿ, ಸಂಸದೆಯಾಗಿ ಸೇವೆ ಸಲ್ಲಿಸಿರುವ ಉಯಿಕೆ, ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದಾರೆ. 2006ರಲ್ಲಿ ರಾಜ್ಯಸಭೆಗೆ ಆಯ್ಕೆಯಾಗಿದ್ದರು. ವಿವಿಧ ಸಂಸದೀಯ ಸ್ಥಾಯಿ ಸಮಿತಿಗಳ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.
ಲಾಲ್ ಜಿ ಟಂಡನ್ ಅವರು ಮಧ್ಯಪ್ರದೇಶದ ಭೂಪಾಲ್ನ ರಾಜಭವನದಲ್ಲಿ ರಾಜ್ಯಪಾಲರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಹೈಕೋರ್ಟ್ ನ್ಯಾಯಮೂರ್ತಿ ರವಿಶಂಕರ್ ಝಾ ಅವರು ಪ್ರತಿಜ್ಞಾ ವಿಧಿ ಬೋಧಿಸಿದರು. ಈ ಸಂದರ್ಭದಲ್ಲಿ ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲ್ನಾಥ್ ಉಪಸ್ಥಿತರಿದ್ದರು.
ಕಳೆದ ವಾರ ಟಂಡನ್ ಅವರನ್ನು ರಾಜ್ಯಪಾಲರಾಗಿ ನೇಮಸಿ ರಾಷ್ಟ್ರಪತಿ ಆದೇಶ ಹೊರಡಿಸಿದ್ದರು. ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಲಕ್ನೋ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ (2009)ಇವರು ಆಯ್ಕೆಯಾಗಿದ್ದರು.
ಇನ್ನು ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಆರು ಬಾರಿ ಸದಸ್ಯರಾಗಿದ್ದ ಫಾಗು ಚೌಹ್ಹಾಣ್ ಅವರು ಬಿಹಾರದ ರಾಜ್ಯಪಾಲರಾಗಿ ಪ್ರಮಾಣ ವಚನ ಸ್ವೀಕರಿಸಿದರು.