ನವದೆಹಲಿ:ನಿಗದಿತ ಕ್ಯಾರಂಟೈನ್ ಅವಧಿ ಪೂರ್ಣಗೊಳಿಸಿದ ಇಲ್ಲವೇ ಕೊರೊನಾ ವೈರಸ್ನಿಂದ ಗುಣಮುಖರಾದ ಸುಮಾರು 4,000 ತಬ್ಲಿಘಿ ಜಮಾತ್ ಸದಸ್ಯರನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. ಇದೀಗ ಅವರು ತಮ್ಮ ರಾಜ್ಯಗಳಿಗೆ ತೆರಳಬಹುದು ಎಂದು ದೆಹಲಿ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ತಿಳಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಜೈನ್, ಮಾರ್ಚ್ನಲ್ಲಿ ನಿಜಾಮುದ್ದೀನ್ ಮಾರ್ಕಜ್ನಲ್ಲಿ ನಡೆದ ಧಾರ್ಮಿಕ ಸಭೆಗೆ ಹಾಜರಾದ ಮತ್ತು ಯಾವುದೇ ಪೊಲೀಸ್ ಪ್ರಕರಣದಲ್ಲಿ ಭಾಗಿಯಾಗದವರಿಗೆ ವಲಸಿಗರೊಂದಿಗೆ ಪ್ರಯಾಣಿಸಲು ಅವಕಾಶ ನೀಡಲಾಗುವುದು ಎಂದರು.
ತಬ್ಲಿಘಿ ಜಮಾತ್ನಿಂದ ಕ್ವಾರಂಟೈನ್ ಆಗಿದ್ದವರು, ಕೋವಿಡ್ ಲಕ್ಷಣ ಇಲ್ಲವದರು ಹಾಗೂ ನಿಗದಿತ ಸಮಯ ಕ್ವಾರಂಟೈನ್ನಲ್ಲಿ ಕಳೆದವರನ್ನು ಕೆಲವು ಮಾರ್ಗಸೂಚಿಗಳ ಮೇರೆಗೆ ಆಯಾ ರಾಜ್ಯಗಳಿಗೆ ಕಳುಹಿಸಲಾಗುವುದು ಎಂದಿದ್ದಾರೆ.
ಇನ್ನು ಈ ಸಭೆಯಲ್ಲಿ ಪಾಲ್ಗೊಂಡಿದ್ದ ಸುಮಾರು 1,100 ಜನರಲ್ಲಿ ಕೊರೊನಾ ಪಾಸಿಟಿವ್ ಕಂಡುಬಂದಿತ್ತು. ಈವರೆಗೆ ದೆಹಲಿಯಲ್ಲಿ 5,532 ಕೊರೊನಾ ಪಾಸಿಟಿವ್ ಪ್ರಕರಣ ದೃಢಪಟ್ಟಿವೆ. ಅಲ್ಲದೆ ನಿನ್ನೆ ದೆಹಲಿಯಲ್ಲಿ 428 ಪ್ರಕರಣಗಳು ವರದಿಯಾಗಿದ್ದು, ನಗರದಲ್ಲಿ ಕೊರೊನಾ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಜೈನ್ ಮಾಹಿತಿ ನೀಡಿದ್ದಾರೆ.
ಇನ್ನು ದೆಹಲಿಯಲ್ಲೀಗ 3,925 ಸಕ್ರಿಯ ಕೊರೊನಾ ಪ್ರಕರಣಗಳಿದ್ದು, ಕೇವಲ 84 ರೋಗಿಗಳು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಮೊದಲು ದೆಹಲಿಯಲ್ಲಿ ಕೊರೊನಾ ಹರಡುವಿಕೆಯ ಪ್ರಮಾಣ ಶೇ. 20ರಷ್ಟಿತ್ತು. ಆದರೆ ಈಗ ಅದರ ಪ್ರಮಾಣ ಶೇ. 8ಕ್ಕೆ ಕುಸಿದಿದೆ ಎಂದು ಜೈನ್ ಮಾಹಿತಿ ನೀಡಿದ್ದಾರೆ.