ಹೊಸದಿಲ್ಲಿ: ದೆಹಲಿ ಮೂಲದ ತಬ್ಲಿಘಿ ಜಮಾತ್ ಮರ್ಕಜ್ ಮುಖ್ಯಸ್ಥ ಮೌಲಾನಾ ಸಾದ್ ವಿರುದ್ಧ ಕಠಿಣ ಸೆಕ್ಷನ್ಗಳಡಿ ಮನುಷ್ಯರ ಹತ್ಯಾ ಯತ್ನದ ಆರೋಪದಡಿ (ಕೊಲೆ ಅಲ್ಲದ) ಎಫ್ಐಆರ್ ದಾಖಲಿಸಿದ್ದಾರೆ. ಈ ಸೆಕ್ಷನ್ ಎರಡನೇ ದರ್ಜೆ ಕೊಲೆಗೆ ಸಮಾನವಾಗಿದೆ. ಆರೋಪಿಯ ವಿಚಾರಣೆ ಸಮಯದಲ್ಲಿ ಮತ್ತಷ್ಟು ಗಂಭೀರ ಆರೋಪಗಳು ಕಂಡು ಬಂದಲ್ಲಿ ಮತ್ತಷ್ಟು ಕಠೋರ ಸೆಕ್ಷನ್ಗಳನ್ನು ಪೊಲೀಸರು ಸೇರಿಸಬಹುದಾಗಿದೆ ಎಂದು ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಸಾದ್ ಹಾಗೂ ಇತರರ ವಿರುದ್ಧ ದಾಖಲಿಸಲಾದ ಎಫ್ಐಆರ್ನಲ್ಲಿ ಐಪಿಸಿ ಸೆಕ್ಷನ್ 304 ಸೇರಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಹಿರಿಯ ವಕೀಲ ಮುಕುಲ್ ರೋಹಟಗಿ, "ಈ ಪ್ರಕರಣ ಸ್ಪಷ್ಟವಾಗಿ ಸೆಕ್ಷನ್ 302 ಹಾಗೂ 304 ರಡಿ ಬರುತ್ತದೆ. ದೇಶದಲ್ಲಿ ವರದಿಯಾಗಿರುವ ಕೊರೊನಾ ಪಾಸಿಟಿವ್ ಪ್ರಕರಣಗಳ ಪೈಕಿ ಅತಿದೊಡ್ಡ ಭಾಗವಾಗಿರುವ ತಬ್ಲೀಘಿ ಜಮಾತ್ ಜನತೆ ಮಾರ್ಚ್ನಲ್ಲಿ ನಡೆಸಿದ ಕೃತ್ಯಗಳು ಕ್ರಿಮಿನಲ್ ನಿರ್ಲಕ್ಷ್ಯದಿಂದ ಕೂಡಿದ್ದವು. ತಮ್ಮ ಕೃತ್ಯದಿಂದ ಇತರರಿಗೂ ಸೋಂಕು ಹರಡಬಹುದು ಹಾಗೂ ಸಾಕಷ್ಟು ಜನ ಸಾಯಬಹುದು ಎಂಬುದರ ಅರಿವು ಅವರಿಗೆ ಇತ್ತು." ಎಂದು ಹೇಳಿದರು.