ಕ್ಯಾನ್ಬೆರಾ (ಆಸ್ಟ್ರೇಲಿಯಾ):ಕೊರೊನಾ ವೈರಸ್ ಹಾವಳಿ ತೀವ್ರವಾಗುತ್ತಿರುವಾಗ ಈ ವರ್ಷ ಟಿ-20 ಕ್ರಿಕೆಟ್ ವಿಶ್ವಕಪ್ ನಡೆಯುವುದು ವಾಸ್ತವಕ್ಕೆ ದೂರವಾಗಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಅಧ್ಯಕ್ಷ ಎರ್ಲ್ ಎಡ್ಡಿಂಗ್ಸ್ ಅಭಿಪ್ರಾಯಪಟ್ಟಿದ್ದಾರೆ.
ಈ ಬಾರಿಯ ಟಿ-20 ವಿಶ್ವಕಪ್ ಟೂರ್ನಿ ಅಕ್ಟೋಬರ್ 18ರಿಂದ ನವೆಂಬರ್ 15ರವರೆಗೆ ನಡೆಯಬೇಕಿತ್ತು. ಆದರೆ ಕೊರೊನಾ ಹಾಗೂ ಲಾಕ್ಡೌನ್ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಗಡಿಗಳು ಮುಚ್ಚಿವೆ. ಒಂದು ರಾಷ್ಟ್ರದಿಂದ ಮತ್ತೊಂದು ರಾಷ್ಟ್ರಕ್ಕೆ ಪ್ರಯಾಣ ಬೆಳೆಸುವುದು ಕಷ್ಟವಾಗಲಿದ್ದು, ಟೂರ್ನಿಯನ್ನು ಮುಂದೂಡಲು ಚಿಂತನೆ ನಡೆಸಲಾಗಿದೆ.
ಟಿ-20 ವಿಶ್ವಕಪ್ ಟೂರ್ನಿ ರದ್ದಾಗದಿದ್ದರೆ ಅಥವಾ ಮುಂದೂಡಿಕೆಯಾಗದಿದ್ದರೆ, ಕ್ರಿಕೆಟ್ನಲ್ಲಿ ಭಾಗವಹಿಸುವ ಒಟ್ಟು 16 ರಾಷ್ಟ್ರಗಳನ್ನು ಆಸ್ಟ್ರೇಲಿಯಾಗೆ ಕರೆತರುವ ಕೆಲಸ ಮಾಡಬೇಕಾಗುತ್ತದೆ. ಆದರೆ ಕ್ರಿಕೆಟ್ ಆಡುವ ಬಹುತೇಕ ರಾಷ್ಟ್ರಗಳಲ್ಲಿ ಕೊರೊನಾ ಗಂಭೀರವಾಗಿ ಆವರಿಸಿದೆ. ಅದ್ದರಿಂದ ಈ ವರ್ಷ ಕ್ರಿಕೆಟ್ ಟೂರ್ನಿ ಆಯೋಜನೆ ಅವಾಸ್ತವ ಹಾಗೂ ತುಂಬಾ ಕಠಿಣ ಎಂದು ಎರ್ಲ್ ಎಡ್ಡಿಂಗ್ಸ್ ತಿಳಿಸಿದ್ದಾರೆ.