ಮುಂಬೈ:ಮ್ಯೂಸಿಕ್ ಲೇಬಲ್ ಮತ್ತು ಪ್ರೊಡಕ್ಷನ್ ಹೌಸ್ ಟಿ-ಸಿರೀಸ್ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಆಕ್ಷೇಪದ ಹಿನ್ನೆಲೆಯಲ್ಲಿ ಪಾಕಿಸ್ತಾನದ ಗಾಯಕ ಅತೀಫ್ ಅಸ್ಲಂ ಅವರ ಹಾಡನ್ನು ತಮ್ಮ ಯೂಟ್ಯೂಬ್ ಚಾನೆಲ್‌ನಿಂದ ತೆಗೆದುಹಾಕಿದೆ.
ಟಿ-ಸಿರೀಸ್ ಶನಿವಾರ ಅತೀಫ್ ಅವರ 'ಕಿನ್ನಾ ಸೋನಾ' ಹಾಡನ್ನು ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆ ಮಾಡಿತ್ತು. ಈ ವೇಳೆ, ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಎಂಎನ್ಎಸ್ ಚಿತ್ರಪತ್ ಸೇನಾ ಅಧ್ಯಕ್ಷ ಅಮೆಯಾ ಖೋಪ್ಕರ್ ವಿಡಿಯೋ ತೆಗೆದುಹಾಕಬೇಕು. ಇಲ್ಲದಿದ್ದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದರು.
ಈ ಬಳಿಕ ಎಂಎನ್‌ಎಸ್ ಮುಖ್ಯಸ್ಥ ರಾಜ್ ಠಾಕ್ರೆಗೆ ಪತ್ರ ಬರೆದಿರುವ ಟಿ- ಸಿರೀಸ್ ಸಂಸ್ಥೆ, 'ತಿಳಿಯದೆ ನಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹಾಡನ್ನು ಅಪ್ಲೋಡ್ ಮಾಡಲಾಗಿದೆ. ನಮ್ಮ ಸಿಬ್ಬಂದಿಯೊಬ್ಬರು ತಿಳಿಯದೇ ಈ ತಪ್ಪು ಮಾಡಿದ್ದಾರೆ. ಇದನ್ನು ತೀವ್ರವಾಗಿ ವಿಷಾದಿಸುತ್ತೇವೆ ಮತ್ತು ಕ್ಷಮೆಯಾಚಿಸುತ್ತೇವೆ. ನಾವು ಪಾಕಿಸ್ತಾನಿ ಗಾಯಕರಿಗೆ ಸಹಾಯ ಮಾಡುವುದಿಲ್ಲ. ಅವರ ಹಾಡುಗಳನ್ನು ಪ್ರಚಾರ ಮಾಡುವುದಿಲ್ಲ' ಎಂದಿದ್ದಾರೆ.
2019ರಲ್ಲಿ ನಡೆದ ಪುಲ್ವಾಮ ಭಯೋತ್ಪಾದಕ ದಾಳಿ ಬಳಿಕ ಪಾಕಿಸ್ತಾನದ ಗಾಯಕರೊಂದಿಗೆ ಕೆಲಸ ಮಾಡುವುದನ್ನು ನಿಲ್ಲಿಸುವಂತೆ ಎಂಎನ್‌ಎಸ್ ಸಂಗೀತ ಕಂಪನಿಗಳಿಗೆ ಸೂಚಿಸಿತ್ತು. ಅಷ್ಟೇ ಅಲ್ಲದೆ, 2016ರಲ್ಲಿ ನಡೆದ ಉರಿ ದಾಳಿ ಬಳಿಕ ಪಾಕಿಸ್ತಾನಿ ನಟರು ಭಾರತೀಯ ಚಿತ್ರರಂಗದಲ್ಲಿ ನಟಿಸಬಾರದು ಎಂದು ನಿಷೇಧ ಹೇರಲಾಗಿತ್ತು.