ಬಯಲು ಬಹಿರ್ದೆಸೆ ಸಮಸ್ಯೆಯಿಂದ ಗ್ರಾಮೀಣ ಭಾರತ ಮುಕ್ತವಾಗಲಿದೆ ಎಂದು ಪ್ರಧಾನಮಂತ್ರಿ ಮೋದಿ ಅವರು ಅಕ್ಟೋಬರ್ 2ರಂದು ಘೋಷಿಸಿದ್ದರು. ʼಸ್ವಚ್ಛ ಭಾರತ ಯೋಜನೆ ಅಂಗವಾಗಿ 60 ತಿಂಗಳುಗಳಲ್ಲಿ ನಾವು 11 ಕೋಟಿ ಶೌಚಾಲಯಗಳನ್ನು ನಿರ್ಮಿಸಿದ್ದೇವೆ. ಇದರಿಂದ 60 ಕೋಟಿ ಜನರಿಗೆ ಅನುಕೂಲವಾಗಿದೆ. ಇಡೀ ಜಗತ್ತು ಈ ಸಾಧನೆಯಿಂದ ಬೆರಗಾಗಿದೆ ಎಂದಿದ್ದರು.
ದೇಶದಲ್ಲಿ ತಾವು ತಂದ ಈ ಗಮನಾರ್ಹ ಸಾಧನೆಗಾಗಿ ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಪ್ರತಿಷ್ಠಾನ ನೀಡುವ 'ಗ್ಲೋಬಲ್ ಗೋಲ್‌ಕೀಪರ್ʼ (ಜಾಗತಿಕ ಸಾಧಕ) ಪ್ರಶಸ್ತಿಯನ್ನು ಇದೇ ವರ್ಷದ ಸೆಪ್ಟಂಬರ್‌ನಲ್ಲಿ ಪ್ರಧಾನಿ ಸ್ವೀಕರಿಸಿದ್ದರು.
ಹೀಗಿದ್ದರೂ, 76ನೇ ರಾಷ್ಟ್ರೀಯ ಮಾದರಿ ಸಮೀಕ್ಷೆ (ನ್ಯಾಶನಲ್ ಸ್ಯಾಂಪಲ್ ಸರ್ವೇ - ಎನ್‌ಎಸ್‌ಎಸ್) ಅಂಗವಾಗಿ ರಾಷ್ಟ್ರೀಯ ಸಾಂಖ್ಯಿಕ ಕಚೇರಿ ಹೊರತಂದಿರುವ ʼಸುರಕ್ಷಿತ ಕುಡಿಯುವ ನೀರು, ನೈರ್ಮಲ್ಯ, ಸ್ವಚ್ಛತೆ ಮತ್ತು ವಸತಿ ಸ್ಥಿತಿಗತಿʼ ಶಿರ್ಷಿಕೆಯಡಿ ಸಿದ್ಧಪಡಿಸಲಾಗಿರುವ ಇತ್ತೀಚಿನ ವರದಿಯು ಪ್ರಧಾನಿಯವರ ಹೇಳಿಕೆಗೆ ಪೂರ್ತಿಯಾಗಿ ವ್ಯತಿರಿಕ್ತವಾಗಿದೆ. ಗ್ರಾಮೀಣ ಭಾರತದ ಶೇಕಡಾ 29ರಷ್ಟು ಜನರು ಶೌಚಾಲಯಗಳನ್ನು ಹೊಂದಿಲ್ಲ ಎಂದು ವರದಿ ಹೇಳಿದೆ. ಒಡಿಶಾ ಮತ್ತು ಉತ್ತರ ಪ್ರದೇಶ ರಾಜ್ಯಗಳ ಬಹುತೇಕ ಅರ್ಧಕ್ಕರ್ಧದಷ್ಟು ಜನ ಈ ಸಮಸ್ಯೆ ಎದುರಿಸುತ್ತಿದ್ದಾರೆ. ಜಾರ್ಖಂಡ್, ತಮಿಳುನಾಡು ಮತ್ತು ರಾಜಸ್ಥಾನ ರಾಜ್ಯಗಳ ಶೇಕಡಾ 30ರಷ್ಟು ಮನೆಗಳಲ್ಲಿ ಕಂಡು ಬರುತ್ತಿರುವುದೂ ಇದೇ ರೀತಿಯ ಸಮಸ್ಯೆ.
ಸ್ವಚ್ಛ ಭಾರತ ಯೋಜನೆ ಅಂಗವಾಗಿ ಶೌಚಾಲಯ ನಿರ್ಮಿಸಿಕೊಳ್ಳುವವರಿಗೆ ಸರ್ಕಾರ ಹಣಕಾಸು ನೆರವನ್ನು ನೀಡಬೇಕು. ಆದರೆ, ದೇಶಾದ್ಯಂತ ಕೇವಲ ಶೇಕಡಾ 17ರಷ್ಟು ಮನೆಗಳು ಮಾತ್ರ ಇದರ ಲಾಭ ಪಡೆದಿವೆ ಎಂಬುದನ್ನು ವರದಿ ಬೊಟ್ಟು ಮಾಡಿ ತೋರಿಸಿದೆ. ಎನ್‌ಎಸ್‌ಎಸ್‌ನ ಈ ವರದಿಯ ಫಲತವ್ಯಗಳು ಸರ್ಕಾರಕ್ಕೆ ಅಪಥ್ಯವಾಗಿರುವುದರಿಂದ, ಬಿಡುಗಡೆ ಮಾಡುವುದಕ್ಕೂ ಮುನ್ನ ಅದನ್ನು ಆರು ತಿಂಗಳುಗಳ ಕಾಲ ನೇಪಥ್ಯದಲ್ಲಿ ಇಡಲಾಗಿತ್ತು. ದೇಶದ ನಿರುದ್ಯೋಗ ಮಟ್ಟ ಶೇ. 6.1ರಷ್ಟು ಏರಿಕೆಯಾಗಿದೆ ಎಂಬುದನ್ನು ಎತ್ತಿ ತೋರಿಸಿದ್ದ ರಾಷ್ಟ್ರೀಯ ಮಾದರಿ ಸಮೀಕ್ಷಾ ಸಂಸ್ಥೆ (ಎನ್‌ಎಸ್‌ಎಸ್‌ಒ) ವರದಿಯ ಬಿಡುಗಡೆಯನ್ನು ಕೂಡಾ ಇದೇ ರೀತಿ ವಿಳಂಬ ಮಾಡಲಾಗಿತ್ತು. ಈ ವರದಿಯನ್ನು ಸಾರ್ವಜನಿಕರಿಗೆ ಬಿಡುಗಡೆ ಮಾಡಿದ್ದೂ ಬಹುತೇಕ ಆರು ತಿಂಗಳುಗಳ ನಂತರವೇ.
ಇದೇ ರೀತಿ, ದೇಶದ ಎಲ್ಲಾ ಗ್ರಾಮಗಳಿಗೂ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ ಎಂದು ಮೋದಿ ಅವರು ಕಳೆದ ವರ್ಷ ಎಪ್ರಿಲ್‌ನಲ್ಲಿ ಹೇಳಿದ್ದರು. ಹಾಗೆ ಹೇಳಿದ ಎರಡು ತಿಂಗಳುಗಳ ನಂತರ, ರಾಕ್‌ಫೆಲ್ಲರ್ ಪ್ರತಿಷ್ಠಾನದ ಸಂಯೋಗದೊಂದಿಗೆ ನೀತಿ ಆಯೋಗ ಹೊರಡಿಸಿದ್ದ ಹೇಳಿಕೆಯಲ್ಲಿ, ಗ್ರಾಮೀಣ ಪ್ರದೇಶದ 45 ಲಕ್ಷ ಕುಟುಂಬಗಳಿಗೆ ವಿದ್ಯುತ್ ಸಂಪರ್ಕ ಇಲ್ಲ ಎಂದು ಹೇಳಲಾಗಿದೆ.
ಅರೆ ಮನಸ್ಸಿನ ಅವಲೋಕನ
ಬಹಿರಂಗವಾಗಿ ಮೂತ್ರ ವಿಸರ್ಜನೆ ಮಾಡಿದ್ದಕ್ಕಾಗಿ ಇಬ್ಬರು ದಲಿತ ಮಕ್ಕಳನ್ನು ಗುಂಪೊಂದು ಥಳಿಸಿ ಸಾಯಿಸಿದ ಘಟನೆ ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯ ಭವೇಖೇಡಿ ಗ್ರಾಮದಲ್ಲಿ ಈ ವರ್ಷದ ಸೆಪ್ಟಂಬರ್‌ನಲ್ಲಿ ನಡೆದಿತ್ತು. ವಾಸ್ತವ ಏನೆಂದರೆ, ಈ ಸಂತ್ರಸ್ತ ಕುಟುಂಬಗಳಿಗೆ ಶೌಚಾಲಯವೇ ಇರಲಿಲ್ಲ. ಕೇಂದ್ರ ಸರ್ಕಾರದ ಆಧೀನದ ಸ್ವಚ್ಛ ಭಾರತ ಸಂವಹನ ನಿಧಿ ಪ್ರಕಾರ, ಭವೇಖೇಡಿ ಗ್ರಾಮ ಬಯಲು ಬಹಿರ್ದೆಸೆ ಸಮಸ್ಯೆಯಿಂದ ಮುಕ್ತವಾಗಿದೆ. ಅದೇ ರೀತಿ ಉತ್ತರ ಪ್ರದೇಶದ ರಾಯ್‌ಬರೇಲಿ ಜಿಲ್ಲೆಯ ಯಾವ ಹಳ್ಳಿಗಳಲ್ಲಿಯೂ ಬಯಲು ಬಹಿರ್ದೆಸೆ ಸಮಸ್ಯೆ ಇಲ್ಲ.
ಆದರೆ, ವಾಸ್ತವಾಂಶಗಳು ಬೇರೆಯೇ ಇವೆ. ಬಯಲು ಬಹಿರ್ದೆಸೆ ಆಚರಿಸುತ್ತಿರುವ ಸಾಕಷ್ಟು ಹಳ್ಳಿಗಳು ಈಗಲೂ ದೇಶದಲ್ಲಿವೆ. ಸ್ವಚ್ಛ ಭಾರತ ಯೋಜನೆ ಅಂಗವಾಗಿ ಯಾವುದಾದರೂ ಗ್ರಾಮವನ್ನು ಬಯಲು ಬಹಿರ್ದೆಸೆ ಮುಕ್ತ ಎಂದು ಘೋಷಿಸಲು ಗ್ರಾಮ ಸಭೆ (ಗ್ರಾಮ ಪಂಚಾಯತ್) ನಿರ್ಧರಿಸಿದರೆ, ಎರಡು ಹಂತದ ತಪಾಸಣೆ ನಡೆಸಿದ ನಂತರವಷ್ಟೇ ಸರ್ಕಾರ ಅದನ್ನು ದೃಢಪಡಿಸಬೇಕು. ಈ ಪರಿಶೀಲನೆಯನ್ನು ಮೂರನೇ ಪಕ್ಷದ ಮೂಲಕ, ಅದರದೇ ಆದ ವ್ಯವಸ್ಥೆಯಲ್ಲಿ ನಡೆಸುವುದು ಕಡ್ಡಾಯ. ಗ್ರಾಮಸಭೆಗಳು ಘೋಷಣೆ ಹೊರಡಿಸಿದ ಮೂರು ತಿಂಗಳುಗಳ ನಂತರ ಈ ತಂಡಗಳು ಸಂಬಂಧಿಸಿದ ಗ್ರಾಮಕ್ಕೆ ಭೇಟಿ ನೀಡಿ, ಬಯಲು ಬಹಿರ್ದೆಸೆ ನಿಜಕ್ಕೂ ನಿಂತುಹೋಗಿದೆ ಎಂಬುದನ್ನು ಕಂಡುಕೊಳ್ಳಬೇಕು. ಎಷ್ಟೋ ರಾಜ್ಯಗಳಲ್ಲಿ ಇಂತಹ ಅವಲೋಕನಗಳು ಸಮರ್ಪಕವಾಗಿ ನಡೆದೇ ಇಲ್ಲ.
ತಪಾಸಣೆಯ ಮೊದಲ ಹಂತದಲ್ಲಿ ಒಡಿಶಾದ 23,902 ಹಳ್ಳಿಗಳಲ್ಲಿ ತಪಾಸಣೆಯನ್ನು ಸೆಪ್ಟಂಬರ್ 26ರಂದು ಪೂರ್ಣಗೊಳಿಸಲಾಯಿತು. ಸೆ. 30ಕ್ಕೆ, ಈ ಸಂಖ್ಯೆ 37,000ಕ್ಕೆ, ಅಂದರೆ ಶೇಕಡಾ 55ಕ್ಕೆ ಏರಿಕೆಯಾಯಿತು. ಕೇವಲ ನಾಲ್ಕು ದಿನಗಳಲ್ಲಿ 13,000 ಹಳ್ಳಿಗಳ ತಪಾಸಣೆ ನಡೆಸಲಾಗಿದೆ! ನಿಗದಿಪಡಿಸಿದ ಮಾನದಂಡಗಳಿಗೆ ಅನುಗುಣವಾಗಿ ಆಯಾ ಹಳ್ಳಿಗಳಲ್ಲಿ ತಪಾಸಣೆ ನಡೆಸಬೇಕೆಂದರೆ, ಕ್ಷೇತ್ರ ತಪಾಸಣೆಗೆ ಒಂದು ತಿಂಗಳಿಗೂ ಹೆಚ್ಚು ಕಾಲ ಬೇಕಾಗುತ್ತದೆ. ಬಯಲು ಬಹಿರ್ದೆಸೆ ಮುಕ್ತ ಎಂದು ಘೋಷಿಸಲಾಗಿರುವ ದೇಶದ ಆರು ಲಕ್ಷ ಹಳ್ಳಿಗಳ ಪೈಕಿ, ಎರಡನೇ ಹಂತದಲ್ಲಿ ಕೇವಲ ಶೇಕಡಾ 25ರಷ್ಟು ಹಳ್ಳಿಗಳಲ್ಲಿ ಮಾತ್ರ ತಪಾಸಣೆ ನಡೆಸಲಾಗಿದೆ. ಉತ್ತರ ಪ್ರದೇಶ ರಾಜ್ಯದ 97,000 ಬಯಲು ಬಹಿರ್ದೆಸೆಮುಕ್ತ ಹಳ್ಳಿಗಳ ಪೈಕಿ ಕೇವಲ ಶೇಕಡಾ ಹತ್ತರಷ್ಟು ಗ್ರಾಮಗಳಲ್ಲಿ ಮಾತ್ರ ಎರಡನೇ ಸಮೀಕ್ಷೆ ನಡೆಸಲಾಗಿದೆ. ಒಡಿಶಾದ 47,000 ಹಳ್ಳಿಗಳ ಪೈಕಿ, ಯಾವ ಹಳ್ಳಿಯಲ್ಲಿಯೂ ಎರಡನೇ ತಪಾಸಣೆಯನ್ನು ನಡೆಸಿಲ್ಲ. ಒಟ್ಟು ಹತ್ತು ರಾಜ್ಯಗಳಲ್ಲಿ, ಎರಡನೇ ಹಂತದ ತಪಾಸಣೆಯನ್ನು ನಡೆಸಿಯೇ ಇಲ್ಲ. ದಾಖಲೆಯಲ್ಲಿ ಈ ಹಳ್ಳಿಗಳು ಬಯಲು ಬಹಿರ್ದೆಸೆಮುಕ್ತ ಎಂದು ನಮೂದಾಗಿದ್ದರೂ, ಬಯಲು ಬಹಿರ್ದೆಸೆ ಅಲ್ಲಿ ನಿಂತಿಲ್ಲ. ಗುರಿ ಮುಟ್ಟುವ ಒತ್ತಡದಲ್ಲಿ, ಅವಶ್ಯಕ ಕಾರ್ಯವಿಧಾನವನ್ನು ಅನುಸರಿಸಿಯೇ ಇಲ್ಲ ಎಂಬುದು ಇದರಿಂದ ಸ್ಪಷ್ಟವಾಗಿದೆ.