ರೆವಾರಿ: ಯೋಧರಿಗೆ ನೀಡುತ್ತಿರುವ ಆಹಾರ ಗುಣಮಟ್ಟವನ್ನು ಪ್ರಶ್ನಿಸಿ, ಸೇವೆಯಿಂದ ವಜಾಗೊಂಡಿರುವ ಬಿಎಸ್ಎಫ್ ಜವಾನ್ ಈಗ ಪ್ರಧಾನಿ ಮೋದಿ ವಿರುದ್ಧವೇ ತೊಡೆ ತಟ್ಟಲು ಸಿದ್ಧರಾಗುತ್ತಿದ್ದಾರೆ.
ಆಹಾರ ಗುಣಮಟ್ಟ ಪ್ರಶ್ನಿಸಿ ವಿಡಿಯೋ ಹರಿಬಿಟ್ಟಿದ್ದ ತೇಜ್ ಬಹದ್ದೂರ್ ಯಾದವ್, ಈಗ ವಾರಣಾಸಿಯಲ್ಲಿ ಪ್ರಧಾನಿ ಮೋದಿ ಎದುರು ಸ್ಪರ್ಧಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ.
ರೆವಾರಿ ನಿವಾಸಿಯಾದ ತೇಜ್ ಹೇಳಿರುವಂತೆ, ಭ್ರಷ್ಟಾಚಾರ ನಿರ್ಮೂಲನೆ ಮಾಡುವುದಾಗಿ ಹೇಳಿದ್ದ ಮೋದಿ ಆ ಕಾರ್ಯ ಮಾಡಲಿಲ್ಲ. ನಾನು ಆ ಕೆಲಸ ಮಾಡುತ್ತೇನೆ. ಭ್ರಷ್ಟಾಚಾರ ಮುಕ್ತ ಭಾರತ ನಿರ್ಮಾಣ ಮಾಡುತ್ತೇನೆ ಎಂದಿದ್ದಾರೆ.ಕಳೆದ ಹಲವು ತಿಂಗಳಿಂದ ಚುನಾವಣೆಗಾಗಿ ತಯಾರಿ ನಡೆಸುತ್ತಿರುವುದಾಗಿ ಹೇಳಿದ ಅವರು, ನೂರಾರು ವಾರಣಾಸಿ ಮಂದಿ ನನ್ನ ಜೊತೆ ಸಂಪರ್ಕದಲ್ಲಿದ್ದಾರೆ. ವಾರಣಾಸಿಯ ಮತದಾರರ ಪಟ್ಟಿಯಲ್ಲೂ ನನ್ನ ಹೆಸರು ಸೇರ್ಪಡೆ ಮಾಡಿದ್ದೇನೆ ಎಂದಿದ್ದಾರೆ.
2017 ಜನವರಿಯಲ್ಲಿ ತೇಜ್, ಯೋಧರಿಗೆ ನೀಡುತ್ತಿರುವ ಆಹಾರ ಗುಣಮಟ್ಟವನ್ನು ಟೀಕಿಸಿ, ಹರಿಬಿಟ್ಟಿದ್ದ ವಿಡಿಯೋ ಸಾಕಷ್ಟು ಸುದ್ದಿ ಮಾಡಿತ್ತು. ಆಗ ಅವರು ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಬಳಿ ಕಾರ್ಯ ನಿರ್ವಹಿಸುತ್ತಿದ್ದರು. ಇವರ ಎಲ್ಲ ಆರೋಪಗಳನ್ನು ಬಿಎಸ್ಎಫ್ ತಳ್ಳಿ ಹಾಕಿದ ಕಾರಣ ತೇಜ್ರನ್ನು ಸೇವೆಯಿಂದ ವಜಾ ಮಾಡಲಾಗಿತ್ತು.ಕೆಲ ತಿಂಗಳ ಹಿಂದೆಯಷ್ಟೇ ತೇಜ್ ಪುತ್ರ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದ.