ನವದೆಹಲಿ:ಇಂದು ಕೇಂದ್ರದ ಮಾಜಿ ವಿದೇಶಾಂಗ ಸಚಿವೆ ದಿ. ಸುಷ್ಮಾ ಸ್ವರಾಜ್ ಅವರ ಜನ್ಮದಿನ, ಈ ಹಿನ್ನೆಲೆಯಲ್ಲಿ ಅವರ ಪತಿ ಸ್ವರಾಜ್ ಕೌಶಲ್ ಹೃದಯಸ್ಪರ್ಶಿ ಟ್ವೀಟ್ ಮೂಲಕ ಶುಭಕೋರಿದ್ದಾರೆ.
ಟ್ಟಿಟ್ಟರ್ನಲ್ಲಿ ಕೌಶಲ್ ಅವರು, 'ಹುಟ್ಟುಹಬ್ಬದ ಶುಭಾಶಯಗಳು ಸುಷ್ಮಾ ಸ್ವರಾಜ್ - ನಮ್ಮ ಜೀವನದ ಸಂತೋಷ' ಎಂದು ಬರೆದುಕೊಂಡಿದ್ದಾರೆ. ಅಲ್ಲದೇ ಜನ್ಮದಿನದ ಹಿನ್ನೆಲೆಯಲ್ಲಿ ದೇಶದ ರಾಜಕೀಯದಲ್ಲಿ ಉನ್ನತ ಹುದ್ದೆಗಳಲ್ಲಿ ಸೇವೆಸಲ್ಲಿಸಿದ್ದ ಸುಷ್ಮಾರಿಗೆ ವಿದೇಶಾಂಗ ಸಚಿವಾಲಯವು ವಿಶೇಷ ಗೌರವ ಸಲ್ಲಿಸಿದೆ. ನವದೆಹಲಿಯಲ್ಲಿರುವ ಪ್ರವಾಸಿ ಭಾರತೀಯ ಕೇಂದ್ರ ಹಾಗೂ ವಿದೇಶಿ ಸೇವಾ ಸಂಸ್ಥೆಗಳ ಹೆಸರನ್ನು ಮರುನಾಮಕರಣ ಮಾಡಲಾಗಿದೆ.
ಪ್ರವಾಸಿ ಭಾರತೀಯ ಕೇಂದ್ರಕ್ಕೆ ಸುಷ್ಮಾ ಸ್ವರಾಜ್ ಭವನ ಹಾಗೂ ವಿದೇಶಿ ಸೇವಾ ಸಂಸ್ಥೆಗೆ ಸುಷ್ಮಾ ಸ್ವರಾಜ್ ವಿದೇಶಿ ಸೇವಾ ಸಂಸ್ಥೆ ಎಂದು ಹೆಸರಿಡಲಾಗಿದೆ ಎಂದು ವಿದೇಶಾಂಗ ಸಚಿವಾಲಯವು ತಿಳಿಸಿದೆ. ಇನ್ನು ಕಳೆದ ಬಾರಿಯ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರದಲ್ಲಿ ವಿದೇಶಾಂಗ ಸಚಿವೆಯಾಗಿದ್ದ ಸುಷ್ಮಾ ಸ್ವರಾಜ್ ಅವರು 2019ರ ಆಗಸ್ಟ್ನಲ್ಲಿ ನಿಧನರಾಗಿದ್ದರು.
ಟ್ವೀಟ್ಗಳ ಮೂಲಕ ಜನರ ಸಮಸ್ಯೆಗೆ ಸ್ಪಂದಿಸುತ್ತಿದ್ದ, ವಿದೇಶಗಳಲ್ಲಿ ಸಂಕಷ್ಟದಲ್ಲಿದ್ದ ಭಾರತೀಯರ ನೆರವಿಗೆ ನಿಲ್ಲುತ್ತಿದ್ದ ಅವರ ಗುಣ ಭಾರಿ ಪ್ರಶಂಸೆಗೆ ಕಾರಣವಾಗಿತ್ತು. ತಮ್ಮ ನೀತಿಗಳ ಮೂಲಕವೇ ಭಾರತವನ್ನ ವಿದೇಶಗಳಲ್ಲಿ ಮಿಂಚುವಂತೆ ಮಾಡಿದ್ದ ಸುಷ್ಮಾ ಸ್ಮರಾಜ್ ಅನಾರೋಗ್ಯದ ಹಿನ್ನೆಲೆಯಲ್ಲಿ ಕಳೆದ ಲೋಕಸಭಾ ಚುನಾವಣೆಯಿಂದಲೇ ದೂರ ಸರಿದಿದ್ದರು.