ನವದೆಹಲಿ :ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದ ಬಿಜೆಪಿ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ಅವರು ವಿದೇಶಾಂಗ ಸಚಿವಾಯಾಗಿದ್ದ ವೇಳೆ ಟ್ವಿಟರ್ಅನ್ನು ಸಹಾಯಕೇಂದ್ರವಾಗಿ ಪರಿವರ್ತಿಸಿಕೊಂಡಿದ್ದರು. ವಿದೇಶದಲ್ಲಿ ಯಾರೇ ಸಂಕಷ್ಟಕ್ಕೆ ಸಿಲುಕಿದ್ದರೂ ಟ್ವಿಟರ್ ಮೂಲಕ ಮಾಹಿತಿ ಗೊತ್ತಾದ ಕೂಡಲೇ ಅವರಿಗೆ ಬೇಕಾದ ಅಗತ್ಯ ನೆರವು ಕೊಡಿಸುತ್ತಿದ್ದರು.
2015ರಲ್ಲಿ ಯೆಮೆನ್ನಲ್ಲಿ ಸಿಲುಕಿದ್ದ 4ಸಾವಿರ ಭಾರತೀಯರನ್ನು ತವರಿಗೆ ವಾಪಸ್ ಕರೆತರುವ ಜವಾಬ್ದಾರಿ ವಿದೇಶಾಂಗ ಇಲಾಖೆ ಮೇಲಿತ್ತು. ಆಗ ಸಮರ್ಥವಾಗಿ ಕಾರ್ಯನಿರ್ವಹಿಸಲು ಟ್ವಿಟರ್ಅನ್ನು ಒಂದು ಸಾಧನವಾಗಿ ಬಳಸಿಕೊಂಡರು. ಜಾಲತಾಣದಿಂದಾಗಿಯೇ ಆಪರೇಷನ್ ರಹಾತ್ ಯಶಸ್ವಿಯಾಯಿತು.
ಇನ್ನು ಅದೇ ವರ್ಷದಲ್ಲಿ ಟರ್ಕಿಯಲ್ಲಿ ಸಿಲುಕಿದ್ದ ತನ್ನ ಅಮ್ಮನನ್ನು ಸುರಕ್ಷಿತವಾಗಿ ವಾಪಸ್ ಕರೆತರುವಂತೆ ನೇಹಾ ಪರಿಖ್ ಎಂಬುವವರು ಟ್ವೀಟ್ ಮಾಡಿದ್ದರು. ಕೂಡಲೇ ಅಲ್ಲಿನ ರಾಯಭಾರಿ ಕಚೇರಿ ಮೂಲಕ ನೇಹಾ ಅವರ ತಾಯಿಗೆ ಅಗತ್ಯ ದಾಖಲೆಗಳನ್ನು ಕೊಡಿಸಿದ್ದರು. ತಮಿಳುನಾಡು ಮೂಲದ ಜಗನ್ನಾಥ್ ಸೆಲ್ವರಾಜು ಅವರು ತಮ್ಮ ತಾಯಿಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಸಾವಿರ ಕಿ.ಮೀ. ನಡೆದು ದುಬೈ ಕೋರ್ಟ್ನಲ್ಲಿ ವಿಚಾರಣೆ ಎದುರಿಸಿದ್ದರು. ಆದರೆ, ಅವರನ್ನು ವಾಪಸ್ ಕಳುಹಿಸಲು ಕೋರ್ಟ್ ನಿರಾಕರಿಸಿತ್ತು. ಟ್ವಿಟರ್ ಮೂಲಕ ಸುದ್ದಿ ತಿಳಿದ ಸುಷ್ಮಾ ಅವರು ಕೂಡಲೇ ಮಧ್ಯಪ್ರವೇಶಿಸಿದ್ದರು.
2017ರಲ್ಲಿ ಅಮೆರಿಕದ ಜಾರ್ಜಿಯಾದಲ್ಲಿ 50 ದಿನಗಳ ಕಾಲ ಐಸಿಯುನಲ್ಲಿದ್ದ ಭಾರತೀಯ ವಿದ್ಯಾರ್ಥಿಯ ಬಗ್ಗೆ ಟ್ವಿಟರ್ನಲ್ಲಿ ಬಂದ ಮಾಹಿತಿ ಆಧರಿಸಿ ಅವರ ಸಹೋದರನನ್ನು ಸಂತೈಸಿದ್ದರು. ಈ ಸಮಯದಲ್ಲಿ ಅವರು ಪ್ರಯಾಣ ಮಾಡಲು ಸಾಧ್ಯವಿಲ್ಲ ಎಂದು ವೈದ್ಯಕೀಯ ಮೂಲಗಳು ಹೇಳಿವೆ. ಅವರಿಗೆ ಬೇಕಾದ ಅಗತ್ಯ ಔಷಧಗಳನ್ನು ಒದಗಿಸಲಾಗುವುದು ಎಂದು ಭರವಸೆ ನೀಡಿದ್ದರು.
2018ರಲ್ಲಿ ಲಂಡನ್ನಲ್ಲಿ 14 ವರ್ಷದ ಹುಡುಗಿಯೊಬ್ಬಳು ವೀಸಾ ಸಮಸ್ಯೆ ಎದುರಿಸುತ್ತಿದ್ದನ್ನು ಟ್ವಿಟರ್ ಮೂಲಕ ತಿಳಿದ ಅವರು ತಕ್ಷಣವೇ ಆಕೆಗೆ ಬೇಕಿದ್ದ ಅಗತ್ಯ ದಾಖಲೆಗಳನ್ನು ರಾಯಭಾರ ಕಚೇರಿ ಮೂಲಕ ಕೊಡಿಸಿದ್ದರು. ಹೀಗೆ ತಮ್ಮ ಟ್ವಿಟರ್ ಖಾತೆಯನ್ನೇ ಸಹಾಯ ಕೇಂದ್ರವಾಗಿ ಪರಿವರ್ತಿಸಿಕೊಂಡಿದ್ದು ಸುಷ್ಮಾ ಸ್ವರಾಜ್ ಅವರ ಜನಪರ ಕಾಳಜಿಯನ್ನು ಬಿಂಬಿಸುತ್ತದೆ.