ನವದೆಹಲಿ:ಭಾರತೀಯ ಜನತಾ ಪಾರ್ಟಿಯ ಹಿರಿಯ ನಾಯಕಿ, ಕೇಂದ್ರದ ಮಾಜಿ ಸಚಿವೆ ಸುಷ್ಮಾ ಸ್ವರಾಜ್ ನಿಧನಕ್ಕೆ ಗಣ್ಯಾತಿಗಣ್ಯರು ಕಂಬನಿ ಮಿಡಿದಿದ್ದು, ಟ್ವಿಟರ್ನಲ್ಲಿ ಸಂತಾಪ ಸೂಚಿಸಿದ್ದಾರೆ.
ಶ್ರೀಮತಿ ಸುಷ್ಮಾ ಸ್ವರಾಜ್ ಅವರ ಸಾವು ತುಂಬಾ ನೋವುಂಟುಮಾಡಿದೆ. ದೇಶ ತನ್ನ ಅತ್ಯಂತ ಪ್ರೀತಿಯ ಮಗಳನ್ನು ಕಳೆದುಕೊಂಡಿದೆ. ಸುಷ್ಮಾ ಸ್ವರಾಜ್ ಸಾರ್ವಜನಿಕ ಜೀವನದಲ್ಲಿ ಘನತೆ, ಧೈರ್ಯ ಮತ್ತು ನಿಷ್ಠೆಯ ಪ್ರತೀಕವಾಗಿದ್ದರು. ಅವರು ಯಾವಾಗಲೂ ಜನರಿಗೆ ಸಹಾಯ ಮಾಡಲು ಸಿದ್ಧರಾಗಿದ್ದರು. ಅವರ ಸೇವೆಗಳಿಗಾಗಿ ಎಲ್ಲಾ ಭಾರತೀಯರು ಅವರನ್ನು ಯಾವಾಗಲೂ ನೆನಪಿಸಿಕೊಳ್ಳುತ್ತಾರೆ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹೇಳಿದ್ದಾರೆ.
ಅಸಾಧಾರಣ ರಾಜಕೀಯ ನಾಯಕಿ, ಪ್ರತಿಭಾನ್ವಿತ ವಾಗ್ಮಿ ಮತ್ತು ಅಸಾಧಾರಣ ಸಂಸದೀಯ ಪಟು ಸುಷ್ಮಾ ಸ್ವರಾಜ್ ಜೀ ಅವರ ನಿಧನದ ಬಗ್ಗೆ ಕೇಳಿದಾಗ ನಾನು ಆಘಾತಕ್ಕೊಳಗಾಗಿದ್ದೇನೆ. ದುಃಖ ಭರಿಸುವ ಶಕ್ತಿಯನ್ನು ದೇವರು ಅವರ ಕುಟುಂಬಕ್ಕೆ ನೀಡಲಿ. ಅವರ ಆತ್ಮಕ್ಕೆ ಶಾಂತಿ ದೊರೆಯಲಿ. ಓಂ ಶಾಂತಿ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮೂಲಕ ಸಂತಾಪ ವ್ಯಕ್ತಪಡಿಸಿದ್ದಾರೆ.
ನನ್ನ ಹೃದಯ ಒಡೆದಿದೆ. ಸುಷ್ಮಾ ಸ್ವರಾಜ್ ಇಷ್ಟು ಬೇಗ ನಿಧನರಾಗಿದ್ದಾರೆಂಬುವುದನ್ನು ನಂಬಲಾಗುತ್ತಿಲ್ಲ. ನಾನು ಅವರಿಂದ ಮಾನವೀಯತೆ, ನಮ್ರತೆ, ಸೌಮ್ಯತೆಯ ಅರ್ಥವನ್ನು ಕಲಿತ್ತಿದ್ದೇನೆ. ಅವರು ನನ್ನ ಮನಸ್ಸಿನಲ್ಲಿ ಶಾಶ್ವತವಾಗಿ ಬದುಕಿರುತ್ತಾರೆ. ಅವರಿಗೆ ನನ್ನ ಹೃತ್ಪೂರ್ವಕ ಗೌರವ ಮತ್ತು ಸಂತಾಪ ಎಂದು ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಟ್ವೀಟ್ ಮಾಡಿದ್ದಾರೆ.
ಸುಷ್ಮಾ ಸ್ವರಾಜ್ ಅವರ ನಿಧನದ ಸುದ್ದಿ ತಿಳಿದು ಶಾಕ್ ಆಯಿತು. ಈ ಸುದ್ದಿಯನ್ನು ಸ್ವೀಕರಿಸುವುದು ಕಷ್ಟ. ವಿದೇಶಾಂಗ ಸಚಿವಾಲಯ ಸೇರಿದಂತೆ ಇಡೀ ರಾಷ್ಟ್ರವೇ ದುಃಖದಲ್ಲಿದೆ ಎಂದು ವಿದೇಶಾಂಗ ಸಚಿವ ಡಾ. ಎಸ್.ಜೈಶಂಕರ್ ಟ್ವೀಟ್ ಮಾಡಿದ್ದಾರೆ.
ಸುಷ್ಮಾ ಸ್ವರಾಜ್ ನಿಧನದಿಂದ ತೀವ್ರ ದುಃಖವಾಗಿದೆ. ಅವರು ತುಂಬಾ ನಿಷ್ಠೆ ಮತ್ತು ಭಕ್ತಿಯಿಂದ ತಮ್ಮ ಪಕ್ಷ ಹಾಗೂ ದೇಶಕ್ಕೆ ಸೇವೆ ಸಲ್ಲಿಸಿದ್ದರು. ಜನಸ್ನೇಹಿಯಾದ ಅವರು ವಿದೇಶಾಂಗ ಕಚೇರಿಗೆ ಹೊಸ ಆಯಾಮವನ್ನು ತಂದಿದ್ದರು. ಅವರ ಕುಟುಂಬ ಮತ್ತು ಪ್ರೀತಿಪಾತ್ರರಿಗೆ ನನ್ನ ಪ್ರಾಮಾಣಿಕ ಮತ್ತು ಹೃತ್ಪೂರ್ವಕ ಸಂತಾಪ ಎಂದು ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಟ್ವೀಟ್ ಮಾಡಿದ್ದಾರೆ.
ಸಹೋದರಿ ಸುಷ್ಮಾ ಸ್ವರಾಜ್ ಅವರ ಅಕಾಲಿಕ ಮರಣದ ಬಗ್ಗೆ ಕೇಳಿ ಆಘಾತವಾಯಿತು. ಉತ್ತಮ ಮಾನವೀಯ ಗುಣ ಹೊಂದಿದ್ದ ಅವರು ಯಾವಾಗಲೂ ನಮ್ಮ ನೆನಪಿನಲ್ಲಿರುತ್ತಾರೆ ಎಂದು ರಾಜ್ಯಸಭೆ ವಿಪಕ್ಷ ನಾಯಕ ಗುಲಾಮ್ ನಬಿ ಅಜಾದ್ ಟ್ವೀಟ್ ಮಾಡಿದ್ದಾರೆ.