ನವದೆಹಲಿ:1999ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಬಳ್ಳಾರಿ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಸೋನಿಯಾ ವಿರುದ್ಧ ಪ್ರಬಲ ಎದುರಾಳಿಯಾಗಿದ್ದವರು ಬಿಜೆಪಿಯ ಸುಷ್ಮಾ ಸ್ವರಾಜ್.
30 ದಿನದಲ್ಲಿ ಕನ್ನಡ ಕಲಿತು ಭಾಷಣ ಮಾಡಿದ್ದ ಸುಷ್ಮಾ ಸ್ವರಾಜ್ ಬಳ್ಳಾರಿಯಲ್ಲಿ ಸುಷ್ಮಾ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿದ ಮರುದಿನವೇ ಅವರು ಬಳ್ಳಾರಿಯಲ್ಲಿ ಪ್ರಚಾರ ಆರಂಭಿಸಿದರು. 30 ದಿನಗಳಲ್ಲಿ ಕನ್ನಡವನ್ನು ತಕ್ಕಮಟ್ಟಿಗೆ ಮಾತನಾಡುವುದನ್ನು ಕಲಿತರು. ಕನ್ನಡದಲ್ಲೇ ಸಾರ್ವಜನಿಕ ಭಾಷಣ ನೀಡುವಷ್ಟರ ಮಟ್ಟಿಗೆ ಕನ್ನಡ ಕಲಿತರು. ಆದರೆ, ಆ ಚುನಾವಣೆಯಲ್ಲಿ ಗೆಲುವು ಪಡೆಯಲು ಸಾಧ್ಯವಾಗಿರಲಿಲ್ಲ. ಬಳ್ಳಾರಿ ನಂಟು ಬಿಡದ ಸುಷ್ಮಾ ಅವರು ಆಗಾಗ ಬಳ್ಳಾರಿಗೆ ಬಂದು ಹೋಗುತ್ತಿದ್ದರು.
ಬಳ್ಳಾರಿಯ ರೆಡ್ಡಿ ಸಹೋದರರು ಮತ್ತು ಶ್ರೀರಾಮುಲು ಅವರೊಂದಿಗೆ ಪ್ರತಿ ವರ್ಷ ವರಮಹಾಲಕ್ಷ್ಮೀ ಪೂಜೆಗೆ ಸುಷ್ಮಾ ಅವರು ಬರುತ್ತಿದ್ದರು. ಕೇಂದ್ರದಲ್ಲಿ ವಾರ್ತಾ ಸಚಿವರಾಗಿ ಬಳ್ಳಾರಿ ಜಿಲ್ಲೆಗೆ ದೂರದರ್ಶನ ಮರು ಪ್ರಸಾರ ಕೇಂದ್ರ ಮತ್ತು ಎಫ್ಎಂ ರೆಡಿಯೋ ಕೇಂದ್ರ ಆರಂಭಿಸಿದ್ದರು. ಆರೋಗ್ಯ ಸಚಿವರಾಗಿ ಬೃಹತ್ ಆರೋಗ್ಯ ಮೇಳ ನಡೆಸಿಕೊಟ್ಟಿದ್ದರು.
2010 ರವರೆಗೆ ಬಳ್ಳಾರಿಗೆ ಬಂದ ಅವರು ರೆಡ್ಡಿ ಸಹೋದರರು ಅಕ್ರಮ ಗಣಿಗಾರಿಕೆ ಆರೋಪ ಹೊತ್ತಮೇಲೆ ಬರುವುದನ್ನು ನಿಲ್ಲಿಸಿದರು. ನಂತರ ಅವರು ರೆಡ್ಡಿ ಸಹೋದರರ ಸಂಪರ್ಕದಿಂದ ದೂರ ಸರಿದರು. ಆದರೆ, ಅವರು ಬಳ್ಳಾರಿಯಲ್ಲಿ ಬಿಜೆಪಿ ಪಕ್ಷಕ್ಕೆ ಹಾಕಿದ ಬುನಾದಿಯೇ ಇಂದಿಗೂ ಸಹ ಜಿಲ್ಲೆಯಲ್ಲಿ ಗಟ್ಟಿಯಾಗಿ ನೆಲೆಯೂರಿದೆ.