ನವದೆಹಲಿ:ಇತ್ತೀಚೆಗೆ ನಿಧನರಾದ ಮಾಜಿ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರ ಕೊನೆಯ ಆಸೆಯೊಂದನ್ನು ಅವರ ಮಗಳು ಬಾನ್ಸುರಿ ಸ್ವರಾಜ್ ಈಡೇರಿಸಿದ್ದಾರೆ.
ಪಾಕಿಸ್ತಾನದಲ್ಲಿ ಬಂಧಿತರಾಗಿರುವ ಕುಲಭೂಷಣ್ ಜಾಧವ್ ಪರ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದ ಹರೀಶ್ ಸಾಳ್ವೆ, ಶುಲ್ಕವಾಗಿ ಒಂದು ರೂ. ಸ್ವೀಕರಿಸಲು ನಿರ್ಧರಿಸಿದ್ದರು. ಇದೀಗ ಆ ಶುಲ್ಕವನ್ನುಬಾನ್ಸುರಿ ಸ್ವರಾಜ್ಹರೀಶ್ ಸಾಳ್ವೆ ಅವರಿಗೆ ತಲುಪಿಸಿದ್ದಾರೆ.
ಕಳೆದ ಆಗಸ್ಟ್ 6ರಂದು ಹರೀಶ್ ಸಾಳ್ವೆಯವರಿಗೆ ಸುಷ್ಮಾ ಅವರು ಕರೆ ಮಾಡಿ ತಮ್ಮನ್ನು ಭೇಟಿಯಾಗುವಂತೆ ತಿಳಿಸಿದ್ದರು. ಅಲ್ಲದೆ ನಿಮಗೆ ಸೇರಬೇಕಾದ ಶುಲ್ಕವನ್ನು ಪಡೆಯುವಂತೆ ಹೇಳಿದ್ದರು. ಆದರೆ ಹೀಗೆ ಕರೆ ಮಾಡಿದ್ದ ಕೆಲ ಗಂಟೆಗಳಲ್ಲೇ ಸುಷ್ಮಾ ಸ್ವರಾಜ್ ಹೃದಯಾಘಾತದಿಂದ ವಿಧಿವಶರಾಗಿದ್ದರು.
ಈ ಬಗ್ಗೆ ಟ್ವೀಟ್ ಮಾಡಿರುವ ಸುಷ್ಮಾ ಸ್ವರಾಜ್ ಪತಿ ಸ್ವರಾಜ್ ಕೌಶಾಲ್, ಮಗಳು ಹರೀಶ್ ಸಾಳ್ವೆ ಅವರಿಗೆ ಶುಲ್ಕವನ್ನು ತಲುಪಿಸಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.