ಮುಂಬೈ:ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಮತ್ತು ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವಳಿ ಸಾವುಗಳು ಅಭಿಮಾನಿಗಳಲ್ಲಿ ಸಾಕಷ್ಟು ಅನುಮಾನಗಳನ್ನು ಹುಟ್ಟುಹಾಕಿವೆ. ಇದರ ನಡುವೆ ಮೃತ ಸುಶಾಂತ್ ಸಿಂಗ್ ಅವರ ಸ್ನೇಹಿತ ಮತ್ತು ಜಿಮ್ ಪಾಲುದಾರ ಸುನಿಲ್ ಶುಕ್ಲಾ ಹಲವು ದಾಖಲೆಗಳೊಂದಿಗೆ ಬಾಂಬೆ ಹೈಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ.
ಅರ್ಜಿಯಲ್ಲಿ ದಿಶಾ ಸಾಲಿಯಾನ್ ಅವರ ಸಾವಿನ ಪ್ರಕರಣದಲ್ಲಿನ ಆಸಕ್ತಿಕರ ವಿಷಯವೊಂದು ಉಲ್ಲೇಖಿಸಿರುವ ಶುಕ್ಲಾ, ಒಂದೇ ವಾರದಲ್ಲಿ ಈ ಅವಳಿ ಸಾವುಗಳು ಸಂಭವಿಸಿವೆ. 28 ವರ್ಷದ ಸಾಲಿಯಾನ್ ಜೂನ್ 8ರಂದು ಹೈರೈಸ್ ಅಪಾರ್ಟ್ಮೆಂಟ್ ಮೇಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡರೆ, ಆರು ದಿನಗಳ ನಂತರ ಅಂದರೆ, ಜೂನ್ 14 ರಂದು, 34 ವರ್ಷದ ನಟ ಸುಶಾಂತ್ ಸಿಂಗ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಈ ಅವಳಿ ಸಾವುಗಳಲ್ಲಿ ನಿಗೂಢತೆ ಇದೆ. ಈ ಬಗ್ಗೆ ಮುಂಬೈ ಪೊಲೀಸರು ತನಿಖೆ ನಡೆಸುತ್ತಿರುವಾಗ ಹಲವಾರು ಅಂಶಗಳನ್ನು ಪರಿಗಣಿಸಿಲ್ಲ ಎಂದು ಹೇಳಿದ್ದಾರೆ.