ಮುಂಬೈ:ನಟ ಸುಶಾಂತ್ ಸಿಂಗ್ ರಜಪೂತ್ರದ್ದು ಕೊಲೆ ಅಲ್ಲ, ಆತ್ಮಹತ್ಯೆಯಿಂದ ಸಾವನ್ನಪ್ಪಿದ್ದಾರೆ ಎಂದು ಏಮ್ಸ್‌ನ ವಿಧಿ ವಿಜ್ಞಾನ ವೈದ್ಯಕೀಯ ಮಂಡಳಿ ಖಚಿತಪಡಿಸಿದ ಬಳಿಕ ರಾಜಕಾರಣಿಗಳಿಗೆ, ಮಾಧ್ಯಮಗಳಿಗೆ ಮಹಾರಾಷ್ಟ್ರ ಬಳಿ ಕ್ಷಮೆಯಾಚಿಸುವಂತೆ ಶಿವಸೇನೆ ಆಗ್ರಹಿಸಿದೆ.
ಸುಶಾಂತ್ರದ್ದು ಕೊಲೆ ಎಂದು ಆರೋಪಿಸಿ ಮುಂಬೈ ಪೊಲೀಸರ ಮತ್ತು ಮಹಾರಾಷ್ಟ್ರದ ಚಿತ್ರಣವನ್ನು 'ಕೆಟ್ಟದಾಗಿ' ಬಿಂಬಿಸಲು 'ನಾಯಿಗಳಂತೆ ಬೊಗಳಿದ' ರಾಜಕಾರಣಿಗಳು ಹಾಗೂ ಮಾಧ್ಯಮಗಳೀಗ ಕ್ಷಮೆ ಕೇಳಲಿ. ವಿಧಾನಸಭಾ ಚುನಾವಣೆ ಹಿನ್ನೆಲೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮತ್ತು ಬಿಹಾರದಲ್ಲಿರುವ ಅದರ ಎನ್‌ಡಿಎ ಪಾಲುದಾರ ಜೆಡಿಯು ನಟನ ಸಾವನ್ನು ಚುನಾವಣಾ ಪ್ರಚಾರಕ್ಕಾಗಿ ಬಳಸಿದೆ ಎಂದು ಶಿವಸೇನೆ ತನ್ನ ಮುಖವಾಣಿ 'ಸಾಮ್ನಾ'ದಲ್ಲಿ ಬರೆದುಕೊಂಡಿದೆ.
ಸತ್ಯವನ್ನು ಎಂದಿಗೂ ಮರೆಮಾಚಲು ಸಾಧ್ಯವಿಲ್ಲ. ಅಂತಿಮವಾಗಿ ಸುಶಾಂತ್ ಸಿಂಗ್ ಪ್ರಕರಣದಲ್ಲಿ ಈ ಸತ್ಯವು ಹೊರ ಬಂದಿದೆ. ಸುದ್ದಿವಾಹಿನಿಗಳಲ್ಲಿ, ರಾಜಕೀಯ ನಾಯಕರುಗಳ ಹೇಳಿಕೆಯಲ್ಲಿ ಮಹಾರಾಷ್ಟ್ರವನ್ನು ನಿಂದಿಸಲಾಯಿತು. ಮುಂಬೈ ಪೊಲೀಸರನ್ನು ದೂಷಿಸಲಾಯಿತು. ಇದಕ್ಕೆ ಇವರೆಲ್ಲಾ ಮಹಾರಾಷ್ಟ್ರ ಬಳಿ ಕ್ಷಮಾಪಣೆ ಕೇಳಲಿ ಎಂದು ಸಾಮ್ನಾದಲ್ಲಿ ಉಲ್ಲೇಖಿಸಲಾಗಿದೆ.
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದ ತನಿಖೆಗಾಗಿ ರಚಿಸಲ್ಪಟ್ಟಿದ್ದ ಏಮ್ಸ್‌ನ ವಿಧಿ ವಿಜ್ಞಾನ ವೈದ್ಯಕೀಯ ಮಂಡಳಿ, ಸುಶಾಂತ್ ಸಿಂಗ್ರನ್ನು ಕತ್ತು ಹಿಸುಕಿ ಅಥವಾ ವಿಷಪ್ರಾಶನ ಮಾಡಿ ಕೊಲೆ ಮಾಡಲಾಗಿಲ್ಲ. ನೇಣು ಬಿಗಿದ ಕುತ್ತಿಗೆಯ ಜಾಗ ಬಿಟ್ಟು ಸುಶಾಂತ್ ಮೃತದೇಹದ ಬೇರಾವುದೇ ಅಂಗಾಂಗಗಳ ಮೇಲೆ ಗಾಯದ ಗುರುತುಗಳಿಲ್ಲ. ಅವರು ನೇಣಿಗೆ ಶರಣಾಗಿಯೇ ಮೃತಪಟ್ಟಿದ್ದು, ಇದು ಆತ್ಮಹತ್ಯೆ ಎಂದು ಮೊನ್ನೆ ಅಂತಿಮ ವರದಿ ಸಲ್ಲಿಸಿತ್ತು.