ಮುಂಬೈ(ಮಹಾರಾಷ್ಟ್ರ): ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣಕ್ಕೆ ತಿರುವು ಸಿಕ್ಕಿದೆ. ಮಾದಕ ವಸ್ತು ಕಳ್ಳಸಾಗಣೆ ಮಾಡುತ್ತಿದ್ದ ಆರೋಪದಡಿ ಓರ್ವ ವ್ಯಕ್ತಿಯನ್ನು ಎನ್‌ಸಿಬಿ ತಂಡ ಇಂದು ಬಂಧಿಸಿದೆ.
ಸುಶಾಂತ್ ಗೆಳತಿ ರಿಯಾ ಚಕ್ರವರ್ತಿ ಮಾದಕ ವಸ್ತುಗಳ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಸಿಸಿಬಿ ಪೊಲೀಸರು ಮಾಹಿತಿ ನೀಡಿದ್ದು, ಈ ಬಗ್ಗೆ ತನಿಖೆ ನಡೆಸುತ್ತಿರುವ ಎನ್‌ಸಿಬಿ, ಇದೀಗ ಜೈದ್ ಎಂಬಾತನನ್ನು ಬಂಧಿಸಿ ತನಿಖೆ ಮುಂದುವರಿಸಿದೆ. ಜೈದ್ ಎಂಬಾತ ಮುಂಬೈ ನಗರದಲ್ಲಿ ಗಾಂಜಾ ಸೇರಿದಂತೆ ವಿವಿಧ ರೀತಿಯ ಡ್ರಗ್ಸ್ ಮಾರಾಟ ದಂಧೆಯಲ್ಲಿ ತೊಡಗಿದ್ದ ಎಂದು ಎನ್‌ಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.
ಎನ್‌ಸಿಬಿ ಅಧಿಕಾರಿಗಳ ಪ್ರಕಾರ ಜೈದ್ ಎಂಬಾತ ಉತ್ತಮ ಗುಣಮಟ್ಟದ ಗಾಂಜಾದ ಮೊಗ್ಗುಗಳನ್ನು ಪ್ರತಿ ಗ್ರಾಂಗೆ 5,000 ದರದಲ್ಲಿ ಮಾರಾಟ ಮಾಡುತ್ತಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮುಂಬೈ ನಗರದಲ್ಲಿ ಮಾದಕವಸ್ತು ಕಳ್ಳಸಾಗಣೆ ಆರೋಪದಡಿ ಎನ್‌ಸಿಬಿ ತಂಡ ಕಳೆದ ವಾರ ಇಬ್ಬರು ಆರೋಪಿಗಳನ್ನು ಬಂಧಿಸಿತ್ತು ಹಾಗೂ ಬಂಧನಕ್ಕೊಳಗಾದ ವ್ಯಕ್ತಿಗಳ ವಿಚಾರಣೆ ನಡೆಸಿದಾಗ ಜೈದ್ ಎಂಬ ವ್ಯಕ್ತಿಯ ಹೆಸರು ಕೇಳಿ ಬಂದಿತ್ತು. ಇದೀಗ ಈತನನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.