ನವದೆಹಲಿ:370ನೇ ವಿಧಿಯನ್ನು ರದ್ದುಪಡಿಸಿದ ನಂತರ ಕೇಂದ್ರದ ಮಂತ್ರಿಗಳು ಜಮ್ಮುಕಾಶ್ಮೀರಕ್ಕೆ ಭೇಟಿ ನೀಡುತ್ತಿದ್ದಾರೆ. ಇದೇ ವೇಳೆ ಸುಪ್ರೀಂಕೋರ್ಟ್‌ನಲ್ಲಿ ವಿಧಿ ರದ್ದುಪಡಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆ ಮುಂದುವರೆದಿದೆ.
ನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದ ಸುಪ್ರೀಂಕೋರ್ಟ್‌ನ ಐವರು ನ್ಯಾಯಾಧೀಶರ ಸಾಂವಿಧಾನಿಕ ಪೀಠವು ಬುಧವಾರದಿಂದ ಜಮ್ಮುಕಾಶ್ಮೀರದಲ್ಲಿ 370ನೇ ವಿಧಿಯನ್ನು ರದ್ದುಪಡಿಸಿರುವ ಕುರಿತು ಅರ್ಜಿಗಳನ್ನು ಆಲಿಸಲು ಪ್ರಾರಂಭಿಸಿದೆ.
ಕಳೆದ ವರ್ಷ ಆಗಸ್ಟ್ 5 ರಂದು ಕೇಂದ್ರ ಸರ್ಕಾರವು ಈ ವಿಧಿಯನ್ನು ರದ್ದುಗೊಳಿಸಿತ್ತು. ನಂತರ ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಎಂಬ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸಿದ್ದು, ಕೇಂದ್ರ ನಿರ್ಧಾರವನ್ನು ಪ್ರಶ್ನಿಸಿ ಕೋರ್ಟ್‌ಗೆ ಸಾಕಷ್ಟು ಅರ್ಜಿಗಳು ಸಲ್ಲಿಕೆಯಾಗಿದ್ದವು.
ಸಾರ್ವಜನಿಕರು, ವಕೀಲರು, ರಾಜಕೀಯ ಪಕ್ಷಗಳ ಪ್ರಮುಖರೂ ಸೇರಿದಂತೆ ಅನೇಕರು ಅರ್ಜಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸುತ್ತಿರುವಾಗ ಎಲ್ಲಾ ದಾಖಲೆಗಳ ಸಾಮಾನ್ಯ ಸಂಕಲನವನ್ನು ಸಿದ್ಧಪಡಿಸುವಂತೆ ಕೋರ್ಟ್ ರಾಜಕೀಯ ಪಕ್ಷಗಳಿಗೆ ಸೂಚಿಸಿದೆ. ಇದರಿಂದಾಗಿ ಈ ವಿಷಯದ ವಿಚಾರಣೆ ಸುಲಭವಾಗುತ್ತದೆ ಎಂದು ಅಭಿಪ್ರಾಯಪಟ್ಟಿದೆ.
ನಿನ್ನೆ ನಡೆದ ಅರ್ಜಿಗಳ ವಿಚಾರಣೆ ವೇಳೆ, ವಿಚಾರಣೆಯನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸುವಂತೆ ಹಿರಿಯ ವಕೀಲ ದಿನೇಶ್ ದ್ವಿವೇದಿ ಮನವಿ ಮಾಡಿಕೊಂಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಸಲ್ಲಿಸಿರುವ ಉಲ್ಲೇಖಗಳ ವಿಚಾರಣೆ ನಡೆಯಲಿ, ಮುಂದೆ ದೊಡ್ಡ ಪೀಠಕ್ಕೆ ವರ್ಗಾಯಿಸುವ ಕುರಿತು ತೀರ್ಮಾನ ತೆಗೆದುಕೊಳ್ಳುವುದಾಗಿ ತಿಳಿಸಿದೆ.
ವಿಶೇಷ ವಿಧಿ ರದ್ದತಿ ವಿಚಾರಕ್ಕೆ ಸಂಬಂಧಿಸಿದ ತಕರಾರುಗಳನ್ನು ಎತ್ತಿರುವ ಹೊಸ ಅರ್ಜಿಗಳಿಗೆ ಸ್ಪಂದಿಸುವಂತೆ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರವನ್ನು ಕೋರಿದೆ.