ಲಖನೌ:ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ರ ಬಗ್ಗೆ ಆಕ್ಷೇಪಾರ್ಹ ವಿಡಿಯೋ ಟ್ವೀಟ್ ಮಾಡಿದ್ದಾರೆ ಎಂದು ಆರೋಪಿಸಿ ಹವ್ಯಾಸಿ ಪತ್ರಕರ್ತ ಪ್ರಶಾಂತ್ ಕನೋಜಿಯನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದರು. ಲಖನೌದ ಹಜರತಾಂಗ್ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಎಫ್ಐಆರ್ ಕೂಡಾ ದಾಖಲಾಗಿತ್ತು. ಈ ಸಂಬಂಧ ಸುಪ್ರೀಂ ಕೋರ್ಟ್ನಲ್ಲಿ ಇಂದು ವಿಚಾರಣೆ ನಡೆದಿದ್ದು, ಪ್ರಶಾಂತ್ರನ್ನು ಆದಷ್ಟು ಬೇಗ ಬಿಡುಗಡೆ ಮಾಡುವಂತೆ ಸುಪ್ರೀಂ ಕೋರ್ಟ್ ಉತ್ತರ ಪ್ರದೇಶದ ಪೊಲೀಸರಿಗೆ ಆದೇಶಿಸಿದೆ.
ಇನ್ನು ಪ್ರಶಾಂತ್ ಕಳೆದ 11 ದಿನದಿಂದ ಜೈಲಿನಲ್ಲೇ ಇದ್ದು, ಬಂಧನದ ವಿರುದ್ದ, ದೇಶದ ಹಲವು ಪತ್ರಕರ್ತರು ಮತ್ತು ಸಂಪಾದಕರು ಪ್ರತಿಭಟನೆ ನಡೆಸಿದ್ದರು. ಇವರ ಬಿಡುಗಡೆ ಮಾಡುವಂತೆ ಸುಪ್ರೀಂ ಕೋರ್ಟ್ಗೆ ಮನವಿಯನ್ನು ಸಲ್ಲಿಸಲಾಗಿತ್ತು.
ಪ್ರಶಾಂತ್ ಪತ್ನಿ ಜಗಿಶ ಅರೋರಾ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಪತಿ ಬಂಧನ ಅಕ್ರಮ ಕೂಡಲೇ ಬಿಡುಗಡೆ ಮಾಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ಪ್ರಶಾಂತ್ರ ಬಂಧನ ಅಸಂವಿಧಾನಿಕವಾದದ್ದು ಮತ್ತು ಕಾನೂನಿಗೆ ವಿರೋಧವಾಗಿದೆ ಎಂದು ವಾದಿಸಿದ್ದರು.
ಈ ಬಗ್ಗೆ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಉತ್ತರ ಪ್ರದೇಶ ಸರ್ಕಾರವನ್ನು ಪ್ರಶ್ನಿಸಿದ್ದು, ನೀವು ಪ್ರಶಾಂತ್ ಅವರನ್ನ ಏಕೆ ಬಂಧಿಸಿದ್ದೀರಿ ಮತ್ತು ಯಾವ ಆಧಾರದ ಮೇಲೆ ಬಂಧನ ಮಾಡಿದ್ದೀರಿ ಎಂದು ಉತ್ತರ ಬಯಸಿತ್ತು. ಅಷ್ಟೇ ಅಲ್ಲ ಅವರನ್ನ ಶೀಘ್ರವೇ ಬಂಧ ಮುಕ್ತಗೊಳಿಸುವಂತೆಯೂ ಉತ್ತರಪ್ರದೇಶ ಪೊಲೀಸರಿಗೆ ಆದೇಶಿಸಿದೆ. ಆದ್ರೆ ಉತ್ತರ ಪ್ರದೇಶ ಯೋಗಿ ಸರ್ಕಾರವು ಪ್ರಶಾಂತ್ ಬಿಡುಗಡೆಗಾಗಿ ಸಲ್ಲಿಸಿದ್ದ ಮನವಿಗೆ ವಿರೋಧ ವ್ಯಕ್ತಪಡಿಸಿತ್ತು.
ಬಂಧಿನಕ್ಕೊಳಗಾಗಿದ್ದ ಪ್ರಶಾಂತ್ ವಿರುದ್ಧ ಐಪಿಸಿ ಸೆಕ್ಷನ್ 500(ಮಾನನಷ್ಟ), ಮಾಹಿತಿ ಮತ್ತು ತಂತ್ರಜ್ಞಾನ ಕಾಯ್ದೆ ಅಡಿ ಪ್ರಕರಣ ದಾಖಲಿಸಿತ್ತು.