ನವದೆಹಲಿ: ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಧಿಕಾರ ಕಳೆದುಕೊಳ್ಳಲು ಪ್ರಮುಖ ಕಾರಣವಾಗಿದ್ದ ಕಾಂಗ್ರೆಸ್-ಜೆಡಿಎಸ್ ಅನರ್ಹ ಶಾಸಕರ ವಿಚಾರಣೆ ಇಂದು ಸುಪ್ರೀಂಕೋರ್ಟ್ನಲ್ಲಿ ನಡೆಯಿತು. ಜೆಡಿಎಸ್ ಪಕ್ಷದ ಪರ ವಕೀಲ ರಾಜೀವ್ ಧವನ್ ತಮ್ಮ ವಾದ ಮಂಡನೆ ಮಾಡಿದರು.
ಸುಪ್ರೀಂಕೋರ್ಟ್ನಲ್ಲಿ ಮಾತನಾಡಿದ ಅವರು, ಶಾಸಕರು ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಜತೆಗೆ ಬಿಜೆಪಿ ನಾಯಕರೊಂದಿಗೆ ಗುರುತಿಸಿಕೊಂಡಿದ್ದಾರೆ. ಹೀಗಾಗಿ ಅವರಿಗೆ ವಿಪ್ ಜಾರಿ ಮಾಡಿದ್ರೂ ಅಧಿವೇಶನಕ್ಕೆ ಹಾಜರಾಗಿರಲಿಲ್ಲ ಎಂದು ತಿಳಿಸಿದ್ರು.
ಜೆಡಿಎಸ್ನ ಅನರ್ಹ ಶಾಸಕರಾದ ನಾರಾಯಣಗೌಡ, ವಿಶ್ವನಾಥ್ ಹಾಗೂ ಗೋಪಾಲಯ್ಯ ಅವರಿಗೆ ವಿಪ್ ಜಾರಿ ಮಾಡಲಾಗಿತ್ತು. ಆದರೆ ಅನರ್ಹತೆಯಿಂದ ಪಾರಾಗುವ ಪ್ರಯತ್ನದಿಂದಾಗಿ ಮುಂಬೈಗೆ ಹೋಗಿ ವಾಸ್ತವ್ಯ ಹೂಡಿದ್ದರು. ಇದರ ಕುರಿತು ಸಂಪೂರ್ಣ ವಿಚಾರಣೆಯಾಗಬೇಕು ಎಂದು ಹೇಳಿದರು.
ಇಂದು ಹೊರಬೀಳದ ಅನರ್ಹ ಶಾಸಕರ ಭವಿಷ್ಯ ಅಷ್ಟೊಂದು ತರಾತುರಿಯಲ್ಲಿ ರಾಜೀನಾಮೆ ನೀಡಿ ಮುಂಬೈಗೆ ಓಡಿ ಹೋಗುವ ಅವಶ್ಯಕತೆ ಏನಿತ್ತು. ಸಮ್ಮಿಶ್ರ ಸರ್ಕಾರ ಬೀಳಿಸುವ ಉದ್ದೇಶದಿಂದಲೇ ಈ ರೀತಿಯಾಗಿ ಮಾಡಿದ್ದಾರೆ. ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿದ್ದಾಗಲೇ ಬಿಜೆಪಿ ಸರ್ಕಾರ ರಚನೆ ಮಾಡುವ ಮಾತು ಹೇಳುತ್ತಿತ್ತು. ಅವರಿಗೆ ಬಹುಮತವಿಲ್ಲದಿದ್ದರೂ ಸರ್ಕಾರ ರಚನೆ ಮಾಡಲು ರಾಜ್ಯಪಾಲರು ಹೇಗೆ ಸೂಚನೆ ನೀಡುತ್ತಾರೆ? ಎಂದು ಜೆಡಿಎಸ್ ಪರ ವಕೀಲ ರಾಜೀವ್ ಧವನ್ ಸುಪ್ರೀಂಕೋರ್ಟ್ನಲ್ಲಿ ವಾದ ಮಂಡನೆ ಮಾಡಿದರು.
ರಾಜೀನಾಮೆ ಹಿಂದಿನ ಅರ್ಥವನ್ನು ಸ್ಪೀಕರ್ ತಿಳಿದುಕೊಳ್ಳಬೇಕು. ಸ್ಪೀಕರ್ ಗೆ ಪರಿಶೀಲಿಸಿ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ನೀಡಬೇಕು. ಗುಂಪಾಗಿ ಬಂದು ರಾಜೀನಾಮೆ ನೀಡಿದ್ರೆ ಏನು ಅರ್ಥ? ಎಂದು ರಾಜೀವ್ ಧವನ್ ಪ್ರಶ್ನೆ ಮಾಡಿದರು.
ಇನ್ನು ಸುಪ್ರೀಂಕೋರ್ಟ್ನಲ್ಲಿ ನಾಳೆ ಕಾಂಗ್ರೆಸ್ ಪಕ್ಷದ ಪರ ಕಪಿಲ್ ಸಿಬಲ್ ತಮ್ಮ ವಾದ ಮಂಡನೆ ಮಾಡಲಿದ್ದಾರೆ. ನಿನ್ನೆ ಕೂಡ ಸುಪ್ರೀಂಕೋರ್ಟ್ನಲ್ಲಿ ಅನರ್ಹ ಶಾಸಕ ಆನಂದ್ ಸಿಂಗ್,ಶ್ರೀಮಂತ್ ಪಾಟೀಲ್ ಹಾಗೂ ಆರ್ ಶಂಕರ್ ಪರ ವಾದ ಮಂಡನೆ ಮಾಡಿದ್ದರು.