ನವದೆಹಲಿ: ರಾಮಜನ್ಮಭೂಮಿ-ಬಾಬ್ರಿ ಮಸೀದಿಯ ಬಗ್ಗೆ ಸುಪ್ರೀಂಕೋರ್ಟ್ ಸಾಂವಿಧಾನಿಕ ಪೀಠ ನೀಡಿದ ಐತಿಹಾಸಿಕ ತೀರ್ಪಿನ ಮೇಲೆ ಮರು ಪರಿಶೀಲನಾ ಅರ್ಜಿ ಸಲ್ಲಿಸದಿರಲು ಸುನ್ನಿ ಮತ್ತು ಶಿಯಾ ಮುಖಂಡರು ನಿರ್ಧರಿಸಿದ್ದಾರೆ.
ಸುಪ್ರೀಂಕೋರ್ಟ್ ನೀಡಿರುವ ಮಹತ್ವದ ತೀರ್ಪನ್ನು ನಾವು ಸ್ವಾಗತಿಸಿ, ಒಪ್ಪಿಕೊಳ್ಳುತ್ತೇವೆ. ಈ ತೀರ್ಪಿಗೆ ಸಂಬಂಧಿಸಿದಂತೆ ನಾವು ಯಾವುದೇ ಕಾರಣಕ್ಕೂ ಮರುಪರಿಶೀಲನಾ ಅರ್ಜಿ ಸಲ್ಲಿಸುವುದಿಲ್ಲಎಂದು ಉತ್ತರ ಪ್ರದೇಶದ ಸುನ್ನಿ ಸೆಂಟ್ರಲ್ ವಕ್ಫ್ ಬೋರ್ಡ್‌ನ ಅಧ್ಯಕ್ಷ ಜಫರ್ ಫಾರೂಖಿ ಸ್ಪಷ್ಟಪಡಿಸಿದ್ದಾರೆ.
ಶಿಯಾ ಸಮುದಾಯದ ಮುಖಂಡ ಮೌಲಾನಾ ಕಲ್ಬೆ ಜವಾದ್ ಶಿಯಾ ಸಮುದಾಯದ ಮುಖಂಡ ಮೌಲಾನಾ ಕಲ್ಬೆ ಜವಾದ್ ಪ್ರತಿಕ್ರಿಯಿಸಿ, ಸುಪ್ರೀಂಕೋರ್ಟ್ ತೀರ್ಪನ್ನು ನಾವು ವಿನಮ್ರವಾಗಿ ಸ್ವೀಕರಿಸುತ್ತೇವೆ. ಸಮ್ಮ ಸಮುದಾಯದವರು ಈ ತೀರ್ಪನ್ನು ದೊಡ್ಡ ಪ್ರಮಾಣದಲ್ಲಿ ಒಪ್ಪಿಕೊಂಡಿದ್ದು, ವಿವಾದ ಇಲ್ಲಿಗೆ ಕೊನೆಗೊಂಡಿದೆ. ದೇವರಿಗೆ ಕೃತಜ್ಞನಾಗಿದ್ದು, ತೀರ್ಪಿನ ಬಗ್ಗೆ ಪರಿಶೀಲನಾ ಅರ್ಜಿ ಸಲ್ಲಿಸುವುದಿಲ್ಲ ಎಂದು ತಿಳಿಸಿದ್ದಾರೆ.
ದೆಹಲಿ ಜುಮಾ ಮಸೀದಿ ಮುಖಂಡ ಅಹ್ಮದ್ ಬುಖಾರಿ ಪ್ರತಿಕ್ರಿಯಿಸಿದ್ದು, ನಾವು ಈಗಾಗಲೇ ಸುಪ್ರೀಂಕೋರ್ಟ್ ತೀರ್ಪನ್ನು ಸಮರ್ಥಿಸಿಕೊಂಡಿದ್ದೇವೆ. ದೇಶ ಅಭಿವೃದ್ಧಿಯತ್ತ ಸಾಗಲು ಎಲ್ಲರೂ ಪಣ ತೊಡಬೇಕಾಗಿದ್ದು, ತೀರ್ಪಿನ ವಿರುದ್ಧ ಪರಿಶೀಲನಾ ಅರ್ಜಿ ಸಲ್ಲಿಸುವುದಕ್ಕೆ ನನ್ನ ಸಹಮತವಿಲ್ಲ ಎಂದಿದ್ದಾರೆ.