ವಾಶಿಂಗ್ಟನ್: ವಿದೇಶಿಯರಿಗೆ ನೌಕರಿ ವೀಸಾ ಹಾಗೂ ಎಚ್1-ಬಿ ವೀಸಾ ನೀಡುವುದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಆದೇಶ ಹೊರಡಿಸಿದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಕ್ರಮಕ್ಕೆ ಗೂಗಲ್ ಸಿಇಓ ಸುಂದರ ಪಿಚೈ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
"ವಲಸೆ ಬರುವ ಜನತೆ ಅಮೆರಿಕದ ಆರ್ಥಿಕತೆಯ ಬೆಳವಣಿಗೆಗೆ ಬಹುದೊಡ್ಡ ಕೊಡುಗೆ ನೀಡಿದ್ದು, ಅಮೆರಿಕ ಜಗತ್ತಿನ ಪ್ರಬಲ ತಂತ್ರಜ್ಞಾನ ಶಕ್ತಿಯಾಗಲು ಕಾರಣರಾಗಿದ್ದಾರೆ. ಜೊತೆಗೆ ಗೂಗಲ್ ಇವತ್ತು ಏನಿದೆಯೋ ಅದಕ್ಕೆ ಅವರೇ ಕಾರಣಕರ್ತರು. ಆದರೆ ಇಂದಿನ ಬೆಳವಣಿಗೆ ನಿರಾಶೆ ತಂದಿದೆ. ಆದರೂ ನಾವು ವಲಸೆ ನೌಕರರ ಪರವಾಗಿ ನಿಲ್ಲಲಿದ್ದು, ಎಲ್ಲರಿಗೂ ಸಮಾನ ಅವಕಾಶ ನೀಡಲು ಪ್ರಯತ್ನಿಸಲಿದ್ದೇವೆ." ಎಂದು ಪಿಚೈ ಟ್ವೀಟ್ ಮಾಡಿದ್ದಾರೆ.
ನಾಗರಿಕ ಮತ್ತು ಮಾನವ ಹಕ್ಕುಗಳ ಲೀಡರ್ಶಿಪ್ ಕಾನ್ಫರೆನ್ಸ್ ಅಧ್ಯಕ್ಷೆ ಹಾಗೂ ಸಿಇಓ ವನಿತಾ ಗುಪ್ತಾ ಅವರು ಸಹ ಟ್ರಂಪ್ ಆಡಳಿತದ ನಿರ್ಧಾರವನ್ನು ಖಂಡಿಸಿದ್ದಾರೆ.
"ಇತ್ತೀಚಿನ ಪ್ರಯಾಣ ನಿರ್ಬಂಧವು ಅದೇ ಹಳೆಯ ಜನಾಂಗೀಯ, ಪರಕೀಯ ದ್ವೇಷದ ಪ್ರದರ್ಶನವಾಗಿದೆ. ಆದರೆ ಟ್ರಂಪ್ ಅವರು ತಮ್ಮ ವೈಫಲ್ಯಗಳನ್ನು ಮರೆಮಾಚಲು ಕೈಗೊಳ್ಳುತ್ತಿರುವ ಕ್ರಮಗಳು ಬಹಳ ದಿನ ನಿಲ್ಲಲಾರವು. ವಲಸೆ ಕಾರ್ಮಿಕರನ್ನು ಗುರಿಯಾಗಿಟ್ಟುಕೊಂಡು ಕೈಗೊಳ್ಳಲಾಗುತ್ತಿರುವ, ಕಾಯ್ದೆಗೆ ವಿರುದ್ಧವಾಗಿರುವ ಕ್ರಮಗಳನ್ನು ನ್ಯಾಯಾಲಯಗಳು ಖಂಡಿತವಾಗಿಯೂ ತಡೆಯಲಿವೆ." ಎಂದು ವನಿತಾ ಹೇಳಿದ್ದಾರೆ.
ಈ ಮುನ್ನ ಟ್ರಂಪ್ ಆಡಳಿತದಲ್ಲಿ ದಕ್ಷಿಣ ಮತ್ತು ಮಧ್ಯ ಏಶಿಯಾಗಳ ಉಸ್ತುವಾರಿ ವಹಿಸಿದ್ದ ಅಲೈಸ್ ಜಿ. ವೆಲ್ಸ್ ಅವರು ಕೂಡ ಅಧ್ಯಕ್ಷ ಟ್ರಂಪ್ ಆದೇಶವನ್ನು ಖಂಡಿಸಿದ್ದಾರೆ.