ನವದೆಹಲಿ:ಕಳೆದ ಮೂರು ತಿಂಗಳಿನಿಂದ ರಾಷ್ಟ್ರ ರಾಜಧಾನಿಯಲ್ಲಿ ವಾಯು ಮಾಲಿನ್ಯ ಕಡಿಮೆಯಾಗಿತ್ತು. ಆದರೆ ಇಂದು ಇದ್ದಕ್ಕಿದಂತೆ ದೆಹಲಿ ಗಾಳಿಯ ಗುಣಮಟ್ಟ ಕಡಿಮೆಯಾಗಿದೆ.
ಮಾರ್ಚ್ 25 ರಿಂದ ಲಾಕ್ಡೌನ್ ಹೆರಿದ್ದರಿಂದ ವಾಹನ ಸಂಚಾರ ಮತ್ತು ಕೈಗಾರಿಕೆಗಳು ಸ್ಥಗಿತಗೊಂಡಿದ್ದವು. ಇದರಿಂದಾಗಿ ದೆಹಲಿಯ ಗಾಳಿಯ ಗುಣಮಟ್ಟ ತೀವ್ರವಾಗಿ ಸುಧಾರಿಸಿತ್ತು ಆದರೆ ರಾಜಸ್ಥಾನದಿಂದ ಬೀಸುತ್ತಿರುವ ಸೌಮ್ಯ ಧೂಳಿನ ಬಿರುಗಾಳಿಯಿಂದ ವಾಯು ಗುಣಮಟ್ಟದ ಸೂಚ್ಯಂಕ ಅತ್ಯಂತ ಕಳಪೆ ಮಟ್ಟಕ್ಕೆ ಇಳಿದಿದೆ.
ಸಿಸ್ಟಂ ಆಫ್ ಏರ್ ಕ್ವಾಲಿಟಿ ವೆದರ್ ಫೋರ್ಕಾಸ್ಟಿಂಗ್ ಅಂಡ್ ರಿಸರ್ಚ್ (ಎಸ್ಎಎಫ್ಎಆರ್)ನ ಪ್ರಾಜೆಕ್ಟ್ ಡೈರೆಕ್ಟರ್ ಗುಫ್ರಾನ್ ಬೀಗ್ ಮಾತನಾಡಿ, ರಾಜಸ್ಥಾನದಿಂದ ಬೀಸುತ್ತಿರುವ ಸೌಮ್ಯ ಧೂಳಿನ ಬಿರುಗಾಳಿಯಿಂದಾಗಿ ಹಠಾತ್ ವಾಯುಮಾಲಿನ್ಯ ಉಂಟಾಗಿದೆ. ಗಾಳಿಯ ದಿಕ್ಕು ಬದಲಾಗುತ್ತಿರುವುದರಿಂದ ಮತ್ತು ತೇವಾಂಶವುಳ್ಳ ಗಾಳಿಯು ಬರುತ್ತಿರುವುದರಿಂದ, ದೆಹಲಿಯಲ್ಲಿ ಗಾಳಿಯ ಗುಣಮಟ್ಟವು ಮತ್ತೆ ಉತ್ತಮವಾಗಲಿದೆ ಎಂದಿದ್ದಾರೆ.
ದೆಹಲಿ ತಾಂತ್ರಿಕ ವಿಶ್ವವಿದ್ಯಾಲಯ (ಡಿಟಿಯು) ಪ್ರದೇಶದ ಸಮೀಪ ಒಟ್ಟಾರೆ ಗಾಳಿಯ ಗುಣಮಟ್ಟ ಸೂಚ್ಯಂಕ 326ಕ್ಕೆ ತಲುಪಿತ್ತು. ನರೇಲಾದಲ್ಲಿ 308 ಮತ್ತು ಮುಂಡ್ಕಾದಲ್ಲಿ 307 ರಷ್ಟಿತ್ತು ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ತಿಳಿಸಿದೆ.