ಟೊರೊಂಟೊ(ಕೆನಡಾ): ಇತ್ತೀಚೆಗೆ ಕೆನಡಿಯನ್ ಮೆಡಿಕಲ್ ಅಸೋಸಿಯೇಷನ್ ಜರ್ನಲ್ ಪ್ರಕಟಿಸಿದ ವರದಿಯೊಂದರ ಪ್ರಕಾರ, ಕೋವಿಡ್-19 ಚಿಕಿತ್ಸೆಗಾಗಿ ಹೈಡ್ರಾಕ್ಸಿಕ್ಲೊರೋಕ್ವಿನ್, ಅಝಿಥ್ರೊಮೈಸಿನ್ ಹಾಗೂ ಕ್ಲೊರೋಕ್ವಿನ್ಗಳನ್ನು ಉಪಯೋಗಿಸಲಾಗುತ್ತಿದ್ದರೂ, ರೋಗ ವಾಸಿ ಮಾಡಲು ಇವು ಪ್ರಭಾವಶಾಲಿಯಾಗಿವೆ ಎಂಬುದಕ್ಕೆ ಪ್ರಬಲ ಪುರಾವೆಗಳಿಲ್ಲ. ಜೊತೆಗೆ ಈ ಔಷಧಿಯಿಂದ ಗಂಭೀರ ಅಡ್ಡಪರಿಣಾಮಗಳೂ ಉಂಟಾಗುವ ಬಗ್ಗೆ ವೈದ್ಯರು ಹಾಗೂ ರೋಗಿಗಳು ತಿಳಿದುಕೊಳ್ಳಬೇಕು ಎಂದು ಹೇಳಲಾಗಿದೆ.
ಹೈಡ್ರಾಕ್ಸಿಕ್ಲೊರೋಕ್ವಿನ್ ಔಷಧದ ಅಡ್ಡಪರಿಣಾಮಗಳೇನು? - ಹೃದಯ ಬಡಿತ ಏರುಪೇರಾಗುವಿಕೆ
ಕೋವಿಡ್-19 ಚಿಕಿತ್ಸೆಗಾಗಿ ಹೈಡ್ರಾಕ್ಸಿಕ್ಲೊರೋಕ್ವಿನ್ ಬಳಕೆಯ ಬಗ್ಗೆ ಕೆಲ ಅಪಸ್ವರಗಳು ಕೇಳಿಬಂದಿವೆ. ಈ ಔಷಧಿಯಿಂದ ಗಂಭೀರ ಅಡ್ಡಪರಿಣಾಮಗಳೂ ಉಂಟಾಗುವ ಬಗ್ಗೆ ತಜ್ಞರು ಎಚ್ಚರಿಸಿದ್ದಾರೆ.
ಹೃದಯ ಬಡಿತ ಏರುಪೇರಾಗುವಿಕೆ, ರಕ್ತದಲ್ಲಿನ ಸಕ್ಕರೆ ಅಂಶ ಕಡಿಮೆಯಾಗುವುದು ಮುಂತಾದ ಅಡ್ಡಪರಿಣಾಮಗಳು ಕಾಣಿಸಿಕೊಳ್ಳಬಹುದು. ಅಲ್ಲದೇ ಕ್ಲೊರೋಕ್ವಿನ್ ಹಾಗೂ ಹೈಡ್ರಾಕ್ಸಿಕ್ಲೊರೋಕ್ವಿನ್ಗಳ ಬಳಕೆಯಿಂದ ಹೃದಯ ಸ್ತಂಭನ, ಕೋಮಾ, ಭ್ರಮಾಧೀನತೆ, ಉದ್ವೇಗ ಹಾಗೂ ಮಾನಸಿಕ ಗೊಂದಲ ಮುಂತಾದ ಗಂಭೀರ ಸಮಸ್ಯೆಗಳು ಕಾಣಿಸಿಕೊಳ್ಳಬಹುದು ಎಂದು ಜರ್ನಲ್ ವರದಿಯಲ್ಲಿ ಹೇಳಲಾಗಿದೆ.
ಒಟ್ಟಾರೆಯಾಗಿ ಕೋವಿಡ್-19 ಚಿಕಿತ್ಸೆಯಲ್ಲಿ ಹೈಡ್ರಾಕ್ಸಿಕ್ಲೊರೋಕ್ವಿನ್ ಪರಿಣಾಮದ ಬಗ್ಗೆ ಅಷ್ಟೊಂದು ನಂಬಲರ್ಹ ಪುರಾವೆಗಳಿಲ್ಲ ಹಾಗೂ ಇವುಗಳ ಬಳಕೆಯಿಂದ ರೋಗಿಯ ಪರಿಸ್ಥಿತಿ ಮತ್ತೂ ಹದಗೆಡಬಹುದು ಎಂದು ವರದಿಯಲ್ಲಿ ಎಚ್ಚರಿಸಲಾಗಿದೆ.