ನವದೆಹಲಿ: ಇಲ್ಲಿನ ಜವಹಾರ್ ಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಬೃಹತ್ ಪ್ರತಿಭಟನೆ ನಡೆಸುತಿದ್ದು, ರಸ್ತೆಗಳನ್ನ ಬಂದ್ ಮಾಡಿದ್ದಾರೆ.
ಜೆಎನ್‌ಯು ವಿದ್ಯಾರ್ಥಿಗಳ ಪ್ರತಿಭಟನೆ ಹಾಸ್ಟೆಲ್ ಶುಲ್ಕ ಏರಿಕೆಯನ್ನ ವಿರೋಧಿಸಿ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಮುಂಭಾಗ ಪ್ರತಿಭಟನೆ ನಡೆಸುತಿದ್ದಾರೆ. ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಭಾಗವಹಿಸಿದ್ದು, ಶಿಕ್ಷಣ ಮಂಡಳಿಗೆ ಮುತ್ತಿಗೆ ಹಾಕಲು ವಿದ್ಯಾರ್ಥಿಗಳು ಪ್ರಯತ್ನಿಸಿದ್ದಾರೆ.
ಪ್ರತಿಭಟನಾ ಸ್ಥಳದಲ್ಲಿ ನೂರಾರು ಪೊಲೀಸರು ಬಿಡುಬಿಟ್ಟಿದ್ದು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಗೆ ಪ್ರತಿಭಟನಾಕಾರರ ಪ್ರವೇಶಕ್ಕೆ ತಡೆಯೊಡ್ಡಿದ್ದಾರೆ. ಈ ವೇಳೆ ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಮತ್ತು ಪೊಲೀಸರ ನಡುವೆ ತಳ್ಳಾಟ ಮತ್ತು ನೂಕಾಟ ಸಂಭವಿಸಿದೆ.
ಇಲ್ಲಿಯವರೆಗೆ 2,500 ರೂ. ಶುಲ್ಕ ನೀಡುತಿದ್ದೆವು, ಆದರೆ ಈಗ 7,000 ರೂಪಾಯಿಗೆ ಶುಲ್ಕ ಏರಿಸಿದ್ದಾರೆ. ಇದರಿಂದ ಸಮಸ್ಯೆಯಾಗಿದೆ. ಅಲ್ಲದೆ ವಸ್ತ್ರ ನಿಯಮಗಳನ್ನೂ ಜಾರಿಗೆ ತಂದಿದ್ದಾರೆ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತಿಭಟನೆ ವೇಳೆ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್ ಪೋಖ್ರಿಯಾಲ್ ಮತ್ತು ಜೆಎನ್‌ಯು ವಿಸಿ ಎಂ.ಜಗದೀಶ್ ಕುಮಾರ್ ವಿಶ್ವವಿದ್ಯಾಲಯದ ಕ್ಯಾಂಪಸ್ನಲ್ಲೆ ಇದ್ದರು. ಪ್ರತಿಭಟನೆ ನಡೆಯುತಿದ್ದರಿಂದ ಹೊರ ಬಾರಲು ಸಾಧ್ಯವಾಗಿರಲಿಲ್ಲ. ಪೊಲೀಸ್ ಬಿಗಿ ಭದ್ರತೆಯಲ್ಲಿ ಇಬ್ಬರನ್ನ ವಿಶ್ವವಿದ್ಯಾಲಯದಿಂದ ಹೊರಕ್ಕೆ ಕರೆದುಕೊಂಡು ಬರಲಾಗಿದೆ.