ಹರಿದ್ವಾರ:ಇದು ನಗುವಿನ ರಾಣಿ ಹನ್ಸಿ ಪ್ರಹರಿ ಎಂಬಾಕೆಯ ನೋವಿನ ಕಥೆ. ಸರಣಿ ಸಾಧನೆಗಳನ್ನು ಮಾಡಿ ಗುರುತಿಸಿಕೊಂಡಿದ್ದಾಕೆ ಭಿಕ್ಷಾ ಪಾತ್ರೆ ಹಿಡಿದು ಹರಿದ್ವಾರದ ರೈಲ್ವೆ ನಿಲ್ದಾಣ, ಬಸ್ ಸ್ಟಾಂಡ್ ಮತ್ತು ಗಂಗಾ ತೀರದ ರಸ್ತೆಗಳಲ್ಲಿ ತತ್ತು ಅನ್ನಕ್ಕಾಗಿ ಪರದಾಡುತ್ತಿರುವ ಮನಕಲಕುವ ಕಥೆ.
ಹನ್ಸಿ(ಕನ್ನಡದಲ್ಲಿ ನಗು ಎಂದರ್ಥ), ಈಕೆ ಒಂದು ಕಾಲದಲ್ಲಿ ಕುಮಾವೂನ್ ವಿಶ್ವವಿದ್ಯಾಲಯದ ಹೆಮ್ಮೆಯಾಗಿದ್ದಾಕೆ. ಈ ಪ್ರತಿಷ್ಠಿತ ವಿದ್ಯಾಲಯದ ವಿದ್ಯಾರ್ಥಿ ಯೂನಿಯನ್ನ ಉಪಾಧ್ಯಕ್ಷೆಯಾಗಿದ್ದವಳು. ಒಂದಲ್ಲ ಎರಡು ಬಾರಿ ಇಂಗ್ಲಿಷ್ ಮತ್ತು ರಾಜಕೀಯ ವಿಜ್ಞಾನದಲ್ಲಿ ಪದವಿ ಪಡೆದು ನಂತರ ಅದೇ ವಿಶ್ವವಿದ್ಯಾಲಯದಲ್ಲಿ ಗ್ರಂಥಪಾಲಕರಾಗಿ ಕಾರ್ಯನಿರ್ವಹಿಸಿದವರು.
ರಾಂಖಿಲಾ ಎಂಬ ಗ್ರಾಮವು ಉತ್ತರಾಖಂಡ್ನ ಅಲ್ಮೋರಾ ಜಿಲ್ಲೆಯ ಸೋಮೇಶ್ವರ ವಿಧಾನಸಭಾ ಕ್ಷೇತ್ರದ ಹವಾಲ್ಬಾಗ್ ಅಭಿವೃದ್ಧಿ ಬ್ಲಾಕ್ ಅಡಿಯಲ್ಲಿ ಬರುವ ಗೋವಿಂದಪುರದ ಬಳಿ ಬರುತ್ತದೆ. ಈ ಹಳ್ಳಿಯಲ್ಲಿ ಬೆಳೆದ ಹನ್ಸಿ 5 ಮಕ್ಕಳ ಪೈಕಿ ಹಿರಿಯ ಮಗಳು. ಹನ್ಸಿ ಇಡೀ ಹಳ್ಳಿಯಲ್ಲಿ ತನ್ನ ಅಧ್ಯಯನದ ಬಗ್ಗೆ ಚರ್ಚಿಸುತ್ತಿದ್ದಳು. ಸಣ್ಣ ಪುಟ್ಟ ಕೆಲಸಗಳನ್ನು ಮಾಡುತ್ತಿದ್ದ ಆಕೆಯ ತಂದೆ ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹಗಲು ರಾತ್ರಿ ದುಡಿಯುತ್ತಿದ್ದರು.
ಹನ್ಸಿ ಗ್ರಾಮದ ಒಂದು ಸಣ್ಣ ಶಾಲೆಯಿಂದ ಉತ್ತೀರ್ಣಳಾಗಿ ಪ್ರವೇಶಕ್ಕಾಗಿ ಕುಮಾವೂನ್ ವಿಶ್ವವಿದ್ಯಾಲಯವನ್ನು ತಲುಪಿದಳು. ಪ್ರವೇಶ ಪರೀಕ್ಷೆಯಲ್ಲಿಯೂ ಉತ್ತೀರ್ಣಳಾಗಿ ಆಕೆ ವಿಶ್ವವಿದ್ಯಾಲಯ ಸೇರಿದಳು. ಹನ್ಸಿ ಅಧ್ಯಯನ ಮತ್ತು ಇತರ ಚಟುವಟಿಕೆಗಳಲ್ಲಿ ತುಂಬಾ ವೇಗವಾಗಿದ್ದಳು. ಆಕೆ 1998-99 ಮತ್ತು 2000 ವರ್ಷಗಳಲ್ಲಿ ಕುಮಾವೂನ್ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷಳಾಗಿ ಆಯ್ಕೆಯಾಗಿದ್ದಳು. ಇದರೊಂದಿಗೆ, ಕುಮಾವೂನ್ ವಿಶ್ವವಿದ್ಯಾಲಯದಿಂದ ಎರಡು ಬಾರಿ ಇಂಗ್ಲಿಷ್ ಮತ್ತು ರಾಜಕೀಯ ವಿಜ್ಞಾನದಲ್ಲಿ ಎಂಎ ಉತ್ತೀರ್ಣಳಾಗಿ ಆನಂತರ ಅದೇ ಕುಮಾವೂನ್ ವಿಶ್ವವಿದ್ಯಾಲಯದಲ್ಲಿ ಗ್ರಂಥಪಾಲಕರಾಗಿ ಸುಮಾರು 4 ವರ್ಷಗಳ ಕಾಲ ಕೆಲಸ ಮಾಡಿದರು. ಇದರ ನಂತರ 2008ರವರೆಗೆ ಅನೇಕ ಖಾಸಗಿ ಉದ್ಯೋಗಗಳನ್ನು ಸಹ ಮಾಡಿದರು.