ಅಯೋಧ್ಯೆ(ಉತ್ತರ ಪ್ರದೇಶ): ಪವಿತ್ರ ಕ್ಷೇತ್ರ ಅಯೋಧ್ಯೆಯಲ್ಲಿ ರಾಮ ಮಂದಿರದ ನಿರ್ಮಾಣದ ಆಸೆ ಚಿಗುರಿ ಸದ್ಯ ಕಾರ್ಯ ರೂಪಕ್ಕೆ ಬಂದಿದೆ. ಇನ್ನೆರಡು ದಿನದಲ್ಲೇ ಅಂದ್ರೆ, ಆಗಸ್ಟ್ 5 ರಂದು ಮಂದಿರ ನಿರ್ಮಾಣಕ್ಕೆ ಅಡಿಪಾಯ ಹಾಕಲು ಸಿದ್ಧತೆ ನಡೆದಿದೆ. ಪ್ರಧಾನಿ ನರೇಂದ್ರ ಮೋದಿ, ದೇವಾಲಯ ನಿರ್ಮಾಣಕ್ಕೆ 'ಭೂಮಿ ಪೂಜೆ' ನೆರವೇರಿಸಲಿದ್ದಾರೆ.
ಬಹು ನಿರೀಕ್ಷಿತ ಭೂಮಿ ಪೂಜೆಯು ಆ.5ರ ಬೆಳಗ್ಗೆ 11 ರಿಂದ ಮಧ್ಯಾಹ್ನ 1.30 ರ ನಡುವೆ ಬರುವ ಅಭಿಜಾತ ಮುಹೂರ್ತದಲ್ಲಿ ನಡೆಯುವ ನಿರೀಕ್ಷೆಯಿದೆ. ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಸಮಯವು ಬಹಳ ಶುಭಕಾರಿಯಾಗಿರಲಿದೆ.
ಭೂಮಿ ಪೂಜೆಯೊಂದಿಗೆ ರಾಮ ಮಂದಿರದ ನಿರ್ಮಾಣ ಕಾರ್ಯ ಪ್ರಾರಂಭವಾದ ನಂತರ, ಈ ಸಾಂಪ್ರದಾಯಿಕ ರಚನೆಯು 3.5 ವರ್ಷಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಹೀಗಾಗಿ ಜಗತ್ತಿನ ಗಮನ ಸೆಳೆದಿರುವ ಈ ಐತಿಹಾಸಿಕ ರಾಮ ಮಂದಿರ ನಿರ್ಮಾಣವಾದ ಬಳಿಕ ವಿಶ್ವದ ಅತಿದೊಡ್ಡ ಹಿಂದೂ ದೇವಾಲಯಗಳಲ್ಲಿ ಒಂದಾಗಲಿದೆ.
ಭೂಮಿ ಪೂಜೆ ಎಂದರೇನು?
ಭೂಮಿ ಪೂಜೆ ಒಂದು ಸಾಂಪ್ರದಾಯಿಕ ಆಚರಣೆಯಾಗಿದ್ದು, ಇದನ್ನು ಕೃಷಿ ಉದ್ದೇಶಗಳ ನಿರ್ಮಾಣ ಅಥವಾ ಭೂ ಚಟುವಟಿಕೆಗಳನ್ನು ಪ್ರಾರಂಭಿಸುವ ಮೊದಲು ನಡೆಸಲಾಗುತ್ತದೆ. ಭೂಮಿ ತಾಯಿ ಮತ್ತು ಪ್ರಕೃತಿಯನ್ನು ಹಿಂದೂ ಧರ್ಮದಲ್ಲಿ ಬಹಳ ಶುಭವೆಂದು ಪರಿಗಣಿಸಲಾಗಿದೆ. ಆದ್ದರಿಂದ, ಭೂಮಿ ತಾಯಿಯ ಆಶೀರ್ವಾದ ಪಡೆಯಲು ಸ್ಮಾರಕ, ವಸತಿ, ವಾಣಿಜ್ಯ ಹಾಗೂ ಕೈಗಾರಿಕಾ ಯೋಜನೆ ಪ್ರಾರಂಭವಾಗುವ ಮೊದಲು ಭೂಮಿಯನ್ನು ಪೂಜಿಸಲಾಗುತ್ತದೆ.
ಹೀಗಿರಲಿದೆ ದೇವಾಲಯದ ರಚನೆ...
ಪ್ರಸ್ತುತ ರಾಮ ಮಂದಿರದ ಅಡಿಪಾಯ 15 ಅಡಿ ಆಳದಲ್ಲಿರುತ್ತದೆ. ಇದು 8 ಪದರಗಳನ್ನು ಹೊಂದಿದ್ದು, ಪ್ರತಿ ಪದರವು 2 ಅಡಿ ಅಗಲವಾಗಿರುತ್ತದೆ.
ರಾಮ ಮಂದಿರದ ಉದ್ದೇಶಿತ ಎತ್ತರವನ್ನು 161 ಅಡಿಗಳಿಗೆ ಹೆಚ್ಚಿಸಲಾಗಿದೆ. ಈ ಹಿಂದೆ ಇದನ್ನು 141 ಅಡಿ ಎಂದು ನಿರ್ಧರಿಸಲಾಗಿತ್ತು. ರಾಮ ಮಂದಿರ 5 ಗುಮ್ಮಟಗಳನ್ನು ಹೊಂದಿರುತ್ತದೆ. ಮಂದಿರ ರಚನೆಯ ಉದ್ದೇಶಿತ ಅಗಲ 140 ಅಡಿಗಳು.
ಬರೋಬ್ಬರಿ 69 ಎಕರೆ ಪ್ರದೇಶದಲ್ಲಿ ವ್ಯಾಪಿಸಿರುವ ಹಾಗೂ ಐದು ಗುಮ್ಮಟಗಳನ್ನು ಹೊಂದಿರುವ ವಿಶ್ವದ ಏಕೈಕ ದೇವಾಲಯ ಇದಾಗಲಿದೆ.
ದೇವಾಲಯವು ಮೂರು ಮಹಡಿಗಳನ್ನು ಹೊಂದಿದ್ದು, ಪ್ರತಿ ಮಹಡಿಯಲ್ಲಿ 106 ಸ್ತಂಭಗಳು ಇರಲಿವೆ. ಒಟ್ಟು ಮೂರು ಮಹಡಿಗಳಲ್ಲಿ 318 ಸ್ತಂಭಗಳಿರಲಿವೆ.
ಈ ಎಲ್ಲಾ ಸ್ತಂಭಗಳನ್ನು ಹಿಂದೂ ಪುರಾಣಗಳಿಗೆ ಅನುಗುಣವಾಗಿ ವಿನ್ಯಾಸಗೊಳಿಸಲಾಗುತ್ತದೆ. ಇದೇ ವಿಚಾರವಾಗಿ ಹಲವು ಸಂತರೊಂದಿಗೆ ಸಮಾಲೋಚನೆ ನಡೆಸಿ, ಅವರ ಸಲಹೆಯಂತೆ ಹನುಮಂತ ಮತ್ತು ಕೃಷ್ಣನ ವಿಗ್ರಹಗಳನ್ನು ಸ್ಥಾಪಿಸಲಾಗುತ್ತದೆ.
ಆರಂಭದಲ್ಲಿ ಈ ದೇವಾಲಯವನ್ನು ಎರಡು ಮಹಡಿಗಳಲ್ಲಿ ನಿರ್ಮಿಸಲು ಉದ್ದೇಶಿಸಗಿತ್ತು. ಆದರೆ ದೇವಾಲಯದ ಭವ್ಯತೆಯನ್ನು ಹೆಚ್ಚಿಸುವ ಉದ್ದೇಶದಿಂದ ಇದನ್ನು ಮೂರಕ್ಕೆ ಹೆಚ್ಚಿಸಲಾಗಿದೆ.
ಈ ದೇವಾಲಯದಲ್ಲಿ ಅನೇಕ ಪ್ರದೇಶಗಳನ್ನು ನಿರ್ಮಿಸಲಾಗುತ್ತದೆ. ಅಲ್ಲಿ ಭಕ್ತರು ಕುಳಿತು ಪ್ರಾರ್ಥನೆ ಸಲ್ಲಿಸಲು ಅವಕಾಶ ಸಿಗಲಿದೆ. ಭಕ್ತರ ಪ್ರದಕ್ಷಿಣೆಗಾಗಿ ಕೆಲ ರಚನೆಯನ್ನು ವಿನ್ಯಾಸಗೊಳಿಸಲಾಗಿದೆ.
ಈ ದೇವಾಲಯವು ಐದು ಪ್ರವೇಶದ್ವಾರಗಳನ್ನು ಹೊಂದಿರಲಿದೆ. ಸಿಂಹ ದ್ವಾರ, ನೃತ್ಯ ಮಂಟಪ, ರಾಂದ್ ಮಂಟಪ, ಪೂಜಾ ಕೊಠಡಿ ಹಾಗೂ ಭಕ್ತರ ಪ್ರದಕ್ಷಿಣೆಗೆ ಸ್ಥಳದೊಂದಿಗೆ ಶ್ರೀರಾಮನ ಗರ್ಭಗುಡಿ ಇರಲಿದೆ. ಶ್ರೀರಾಮನ ವಿಗ್ರಹವನ್ನು ನೆಲಮಹಡಿಯ ಗರ್ಭಗುಡಿಯಲ್ಲೇ ಪ್ರತಿಷ್ಠಾಪನೆ ಮಾಡಲಾಗುತ್ತದೆ.
ರಾಮ ದೇಗುಲ ನಿರ್ಮಾಣ ಸ್ಥಳದಲ್ಲಿ ಸುಮಾರು 2,000 ಅಡಿಗಳಷ್ಟು ಆಳದ ಭೂಗರ್ಭದಲ್ಲಿ ಟೈಮ್ ಕ್ಯಾಪ್ಸುಲ್ ಇಡಲಾಗುತ್ತದೆ. ಈ ಕ್ಯಾಪ್ಸುಲ್ ಭವಿಷ್ಯದಲ್ಲಿ ದೇವಾಲಯದ ಇತಿಹಾಸವನ್ನು ಅಧ್ಯಯನ ಮಾಡಲು ಬಯಸುವವರಿಗೆ ಸಹಾಯ ಮಾಡುತ್ತದೆ.