ನವದೆಹಲಿ: ದೇಶದಲ್ಲಿ ಜಿಎಸ್‌ಟಿ ಅನುಷ್ಠಾನಕ್ಕೆ ತಂದಾಗಿನಿಂದಲೂ ಎಲ್ಲ ರಾಜ್ಯ ಸರ್ಕಾರದ ಆದಾಯ ಮೂಲಗಳ ಮೇಲೆ ಪೆಟ್ಟು ಬಿದ್ದಿದ್ದು, ಆದಾಯದ ನಷ್ಟಕ್ಕೆ ಪರಿಹಾರ ನೀಡುವಂತೆ ಕೇಂದ್ರದ ಮೇಲೆ ವಿರೋಧ ಪಕ್ಷದ ಆಡಳಿತದ ರಾಜ್ಯಗಳು ಒತ್ತಡ ಹೇರಿದ್ದವು. ಈ ಬಗೆಗಿನ ಸಮಸ್ಯೆಗಳನ್ನು ಪರಿಹರಿಸಲು ಇಂದು ವಿಡಿಯೋ ಕಾನ್ಫರೆನ್ಸ್ ಮುಖಾಂತರ 41ನೇ ಜಿಎಸ್‌ಟಿ ಕೌನ್ಸಿಲ್ ಸಭೆ ಆರಂಭಗೊಂಡಿದೆ.
ಕೇಂದ್ರ ಸರ್ಕಾರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದಲ್ಲಿ ಸಭೆ ಪ್ರಾರಂಭಗೊಂಡಿದ್ದು, ರಾಜ್ಯಗಳಲ್ಲಿ ಉಂಟಾದ ಆದಾಯ ಕೊರತೆಯ ಬಗ್ಗೆ ಹಾಗೂ ಈ ಕೊರತೆ ನೀಗಿಸುವ ಬಗ್ಗೆ ಹೆಚ್ಚಿನ ಚರ್ಚೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ಇನ್ನು, ಜಿಎಸ್‌ಟಿ ಉತ್ತೇಜನಕ್ಕಾಗಿ ಮಾರುಕಟ್ಟೆ ಸಾಲ, ಸೆಸ್ ದರವನ್ನು ಹೆಚ್ಚಿಸುವುದು ಅಥವಾ ಸೆಸ್ ದರವನ್ನು ವಿಧಿಸಲು ವಸ್ತುಗಳ ಸಂಖ್ಯೆಯನ್ನು ಹೆಚ್ಚಿಸುವುದು ಹಾಗೂ ಜವಳಿ ಮತ್ತು ಪಾದರಕ್ಷೆಗಳಂತಹ ಕೆಲವು ಸರಕುಗಳ ವಲಯಗಳ ಏಳಿಗೆಗಾಗಿ ತಿದ್ದುಪಡಿ ಮಾಡುವ ಕುರಿತು ಚರ್ಚಿಸುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ರೊಂದಿಗೆ ಕೇಂದ್ರ ರಾಜ್ಯ ಖಾತೆ ಸಚಿವ ಅನುರಾಗ್ ಠಾಕೂರ್, ರಾಜ್ಯ ಮತ್ತು ಕೇಂದ್ರ ಪ್ರಾಂತ್ಯಗಳ ಹಣಕಾಸು ಸಚಿವರು, ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಗಳು ಈ ಸಭೆಯಲ್ಲಿ ಪಾಲ್ಗೊಂಡಿದ್ದಾರೆ.
ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ, ನಿನ್ನೆಯೇ ಕಾಂಗ್ರೆಸ್ ಆಡಳಿತದ ರಾಜ್ಯಗಳು ಮತ್ತು ಪಶ್ಚಿಮ ಬಂಗಾಳ, ಮಹಾರಾಷ್ಟ್ರ ಮತ್ತು ಜಾರ್ಖಂಡ್ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಜಿಎಸ್‌ಟಿ ಬಾಕಿಗೆ ಸಂಬಂಧಿಸಿದ ವಿಷಯಗಳ ಕುರಿತು ಸಭೆ ನಡೆಸಿದ್ದರು. ಈ ವೇಳೆ, ರಾಜ್ಯಗಳಿಗೆ ಜಿಎಸ್‌ಟಿ ಪರಿಹಾರ ನೀಡಲು ಕೇಂದ್ರ ಸರ್ಕಾರ ನಿರಾಕರಿಸುವುದು ನರೇಂದ್ರ ಮೋದಿ ಸರ್ಕಾರ ಮಾಡಿರುವ ದ್ರೋಹ ಎಂದಿದ್ದರು.
ಜೂನ್ 12 ರಂದು ನಡೆದ ಜಿಎಸ್‌ಟಿ ಸಭೆಯಲ್ಲಿ, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಮೇಲೆ ಕೊರೊನಾ ಬಿಕ್ಕಟ್ಟಿನ ಪರಿಣಾಮವನ್ನು ತಗ್ಗಿಸುವ ಉದ್ದೇಶದಿಂದ ಜಿಎಸ್‌ಟಿ ಕೌನ್ಸಿಲ್, ಜುಲೈ 2017 ರಿಂದ ಈ ವರ್ಷದ ಜನವರಿಯವರೆಗೆ ಟ್ಯಾಕ್ಸ್ ರಿಟರ್ನ್ಸ್ ಸಲ್ಲಿಸುವ ಶುಲ್ಕವನ್ನು ಮನ್ನಾ ಮಾಡಲು ನಿರ್ಧರಿಸಿತ್ತು.