ನವದೆಹಲಿ: ಕೊರೊನಾ ವೈರಸ್ ಹರಡುವಿಕೆಯನ್ನು ತಡೆಗಟ್ಟಲು ಕಟ್ಟುನಿಟ್ಟಾಗಿ ಲಾಕ್ಡೌನ್ ಜಾರಿಗೆ ತರಬೇಕು ಹಾಗೂ ನಿಯಮ ಉಲ್ಲಂಘಿಸಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಸರ್ಕಾರಗಳಿಗೆ ಕೇಂದ್ರ ಸರ್ಕಾರ ಆದೇಶ ನೀಡಿದೆ.
ಅನೇಕ ಜನರು ಲಾಕ್ಡೌನ್ ಅನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ. ಈಗಾಗಲೇ ಯಾವ್ಯಾವ ರಾಜ್ಯಗಳಲ್ಲಿ ಲಾಕ್ಡೌನ್ ಘೋಷಿಸಲಾಗಿದೆಯೋ ಅಲ್ಲಿ ಕಟ್ಟುನಿಟ್ಟಾಗಿ ನಿಯಮಗಳನ್ನ ಪಾಲಿಸಿ. ಈ ಮೂಲಕ ನಿಮ್ಮನ್ನು, ನಿಮ್ಮ ಕುಟುಂಬವನ್ನು ಉಳಿಸಿಕೊಳ್ಳಿ. ಕಾನೂನು ನಿಯಮಗಳನ್ನು ಸರಿಯಾಗಿ ಅನುಸರಿಸಿ ಎಂದು ನಾನು ರಾಜ್ಯ ಸರ್ಕಾರಗಳನ್ನು ವಿನಂತಿಸುತ್ತೇನೆ ಎಂದು ಪಿಎಂ ಮೋದಿ ಟ್ವೀಟ್ ಮಾಡಿದ್ದಾರೆ.
ಕೊವಿಡ್-19 ಪ್ರಕರಣಗಳು ವರದಿಯಾದ ದೇಶದ 75 ಜಿಲ್ಲೆಗಳನ್ನು ಸಂಪೂರ್ಣವಾಗಿ ಬಂದ್ ಮಾಡಬೇಕೆಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನಿರ್ಧರಿಸಿದೆ. ಅಲ್ಲದೇ ಮಾ.31ರ ವರೆಗೆ ಅಂತರರಾಜ್ಯ ಬಸ್ ಸೇವೆಗಳನ್ನು ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ.
ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 400ರ ಗಡಿ ದಾಟುತ್ತಿದ್ದಂತೆಯೇ ಈಗಾಗಲೇ ಲಾಕ್ಡೌನ್ ಘೋಷಣೆಯಾಗಿರುವ ಉತ್ತರ ಪ್ರದೇಶ, ಮಹಾರಾಷ್ಟ್ರ, ಪಂಜಾಬ್, ಕರ್ನಾಟಕ, ತಮಿಳುನಾಡು ಹಾಗೂ ಕೇರಳ ರಾಜ್ಯಗಳಲ್ಲಿ ಅಗತ್ಯ ಸೇವೆಗಳ ಹೊರತಾಗಿ ಎಲ್ಲಾ ಅಂಗಡಿಗಳು, ವಾಣಿಜ್ಯ ಸಂಸ್ಥೆಗಳು, ಕಾರ್ಖಾನೆಗಳು, ಕಚೇರಿಗಳು, ಗೋದಾಮುಗಳು, ಮಾರುಕಟ್ಟೆಗಳು ಬಂದ್ ಆಗಬೇಕು. ನಿಯಮ ಉಲ್ಲಂಘಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ಸೂಚಿಸಿದೆ.