ಬೆಂಗಳೂರು:ಏಪ್ರಿಲ್ ತಿಂಗಳಲ್ಲಿ ಕೇರಳದ ವಿಷು ಹಬ್ಬ ಹಾಗೂ ತುಳುನಾಡಿನ ಯುಗಾದಿ ಹಬ್ಬಗಳು ಒಂದರ ಹಿಂದೆ ಒಂದರಂತೆ ಬರಲಿವೆ. ಹೀಗಾಗಿ ಬೆಂಗಳೂರಿನಿಂದ ಹಾಗೂ ಕರ್ನಾಟಕದ ವಿವಿಧೆಡೆಗಳಿಂದ ಕೇರಳಕ್ಕೆ ಹೊರಡುವವರ ಸಂಖ್ಯೆ ಹೆಚ್ಚಿದೆ. ಮೂರು ತಿಂಗಳ ಮೊದಲೇ ಈ ಮಾರ್ಗದ ರೈಲುಗಳು ಮುಂಗಡವಾಗಿ ಭರ್ತಿಯಾಗಿದ್ದು ದುಬಾರಿ ಬೆಲೆ ತೆತ್ತು ಖಾಸಗಿ ಬಸ್ಸುಗಳಲ್ಲಿ ಪ್ರಯಾಣಿಸುವ ಅನಿವಾರ್ಯತೆಗೆ ಪ್ರಯಾಣಿಕರು ಸಿಲುಕಿದ್ದಾರೆ.
ಏಪ್ರಿಲ್ 10ರಂದು ಗುಡ್ ಫ್ರೈಡೆ, 11ರಂದು ಎರಡನೇ ಶನಿವಾರ, 12ಕ್ಕೆ ಈಸ್ಟರ್ ಮತ್ತು 14ರಂದು ವಿಷು ಹಬ್ಬವಿದೆ. ಇದರಿಂದಾಗಿ ಸರಣಿ ರಜೆ ಸಿಗಲಿದ್ದು ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿರುವ ಕೇರಳ ಮೂಲದವರು ತಮ್ಮ ಊರುಗಳಿಗೆ ತೆರಳಲು ಈಗಾಗಲೇ ರೈಲು ಟಿಕೆಟ್ ಕಾಯ್ದಿರಿಸಿದ್ದಾರೆ. ಅಂದಾಜು 5 ಲಕ್ಷಕ್ಕೂ ಹೆಚ್ಚಿನ ಕೇರಳದ ಜನರು ಉದ್ಯೋಗ ಅರಸಿ ಬೆಂಗಳೂರಿಗೆ ಬಂದು ಬದುಕು ಕಟ್ಟಿಕೊಂಡಿದ್ದು, ತಮ್ಮ ರಾಜ್ಯದ ಪ್ರಮುಖ ಹಬ್ಬಗಳಲ್ಲಿ ಒಂದಾದ ಹೊಸ ವರ್ಷದ ಸಂಭ್ರಮದಲ್ಲಿ ಭಾಗಿಯಾಗಲು ತೆರಳುತ್ತಿದ್ದಾರೆ.
ಡಿಸೆಂಬರ್ನಲ್ಲೇ ಏಪ್ರಿಲ್ ತಿಂಗಳ ಮುಂಗಡ ಟಿಕೆಟ್ ಬುಕ್ಕಿಂಗ್ ಆರಂಭಗೊಳ್ಳುತ್ತಿದ್ದಂತೆ ಕೆಲವೇ ದಿನಗಳಲ್ಲಿ ಬೆಂಗಳೂರು-ಕೇರಳಕ್ಕೆ ತೆರಳುವ ಎಲ್ಲ ರೈಲುಗಳ ಟಿಕೆಟ್‌ಗಳು ಭರ್ತಿಯಾಗಿವೆ. ಮೂರು ತಿಂಗಳಿಗೂ ಮೊದಲೇ ವೇಟಿಂಗ್ ಲಿಸ್ಟ್ ಆರಂಭಗೊಂಡಿದೆ. ಗುಡ್ ಫ್ರೈಡೆ ಮುನ್ನಾದಿನವಾದ ಗುರುವಾರದಿಂದ ಏಪ್ರಿಲ್ 13ರವರೆಗೆ ಕೇರಳದ ರೈಲುಗಳಲ್ಲಿ ಸ್ಲೀಪರ್ ಕ್ಲಾಸ್ ಆಸನಗಳು ಭರ್ತಿಯಾಗಿವೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ-ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ವೋಲ್ವೋ ಬಸ್ಸುಗಳ ದರ ಅಂದಾಜು 1,100 ರೂಪಾಯಿ ಇದ್ದು, ಹಬ್ಬದ ಸಮಯದಲ್ಲಿ ಇನ್ನು ಹೆಚ್ಚಳವಾಗುವ ಸಾಧ್ಯತೆ ಇದೆ. ಖಾಸಗಿ ಬಸ್ಸುಗಳಲ್ಲಿ ಕನಿಷ್ಠ ದುಪ್ಪಟ್ಟು ದರ ನಿಗದಿಪಡಿಸುವ ಸಾಧ್ಯತೆಯಿದೆ.
ವಿಶೇಷ ರೈಲು ಸೇವೆಗೆ ರೈಲ್ವೆ ಇಲಾಖೆ ನಿರ್ಧಾರ:
ಮೂರು ತಿಂಗಳ ಮೊದಲೇ ಕೇರಳಕ್ಕೆ ಮುಂಗಡ ಟಿಕೆಟ್ ಬುಕ್ಕಿಂಗ್ ಪೂರ್ಣಗೊಂಡಿದೆ. ಈ ಹಿನ್ನೆಲೆ ಪ್ರಯಾಣಿಕರಿಂದ ಹೆಚ್ಚಿನ ಬೇಡಿಕೆ ಬರುತ್ತಿರುವುದರಿಂದ ಬೆಂಗಳೂರಿನಿಂದ ಕೇರಳಕ್ಕೆ ಹೆಚ್ಚುವರಿಯಾಗಿ ವಿಶೇಷ ರೈಲು ಸೇವೆ ಕಲ್ಪಿಸಲು ನಿರ್ಧರಿಸಲಾಗಿದೆ ಎಂದು ರೈಲ್ವೇ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಹಬ್ಬಕ್ಕೂ ಒಂದು ತಿಂಗಳ ಮೊದಲು ವಿಶೇಷ ರೈಲು ಸೇವೆ ಕುರಿತು ಮಾಹಿತಿ ನೀಡುವುದಾಗಿ ರೈಲ್ವೇ ಇಲಾಖೆ ಸ್ಪಷ್ಟಪಡಿಸಿದೆ.